ಮಂಗಳೂರು: ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿರುವ ಈರುಳ್ಳಿ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 21. ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಈರುಳ್ಳಿ ಬಹು ಪ್ರಮುಖವಾಗಿದೆ. ಆದರೆ ಈಗ ಈರುಳ್ಳಿಯ ದರವು ಜನ ಸಾಮಾನ್ಯರ ಕೈಗೆಟುಕದ ರೀತಿಯಲ್ಲಿ ಹೆಚ್ಚಾಗುತ್ತಿದ್ದು, ದಿನ ಕಳೆದಂತೆ ಈರುಳ್ಳಿ ಬೆಲೆಯು ಹತ್ತತ್ತು ರೂಪಾಯಿ ಏರಿಕೆಯಾಗುತ್ತಿದೆ.

ಅಕ್ಟೋಬರ್ 20 ರ ಮಂಗಳವಾರ, ಮಾರುಕಟ್ಟೆಯಲ್ಲಿ ಈರುಳ್ಳಿಯ ಸಗಟು ದರಕ್ಕೆ ಕೆ.ಜಿ.ಗೆ 81 ರೂ. ಇದ್ದರೆ, ಚಿಲ್ಲರೆ ವ್ಯಾಪಾರಿಗಳು ಇದನ್ನು ಕೆಜಿಗೆ 90 ರೂ. ಗೆ ಮಾರಾಟ ಮಾಡಿದ್ದಾರೆ. ಈ ಬೆಲೆಯನ್ನು ಭಾನುವಾರದ ಈರುಳ್ಳಿಯ ಬೆಲೆಗೆ ಹೋಲಿಸಿದರೆ ಏಕಾಏಕಿ 20 ರೂ.ಗೆ ಏರಿಕೆ ಕಂಡಿದೆ. ಇಲ್ಲಿನ ಮಾರುಕಟ್ಟೆಗಳಿಗೆ ಈರುಳ್ಳಿಯು ಹುಬ್ಬಳ್ಳಿ, ಬೆಳಗಾವಿ ಮತ್ತು ಮಹಾರಾಷ್ಟ್ರ ನಗರಗಳಿಂದ ಸಾಗಾಟ ಮಾಡಲಾಗುತ್ತದೆ. ಆದರೆ, ಮಹಾರಾಷ್ಟ್ರದಲ್ಲಿ ಭಾರಿ ಅಕಾಲಿಕ ಮಳೆಗೆ ಈರುಳ್ಳಿ ಬೆಳೆಗಳು ಸಾಕಷ್ಟು ಹಾನಿಗೀಡಾಗಿವೆ. ಕೆಲವೆಡೆ ಸಂಪೂರ್ಣವಾಗಿ ನಾಶವಾಗಿದೆ. ಪ್ರಸ್ತುತ, ಹಳೆಯ ಈರುಳ್ಳಿಯನ್ನು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾಗುತ್ತಿದ್ದು, ಪ್ರಸ್ತುತ ಬೆಳೆಯು ನಾಶವಾ‌ಗಿದೆ. ಡಿಸೆಂಬರ್ ವೇಳೆಗೆ ಮಾರುಕಟ್ಟೆಯಲ್ಲಿ ತಾಜಾ ಈರುಳ್ಳಿ ದೊರೆಯಲಿದೆ. ಆವರೆಗೂ ಈರುಳ್ಳಿ ಬೆಲೆಯು ಏರುಗತಿಯಲ್ಲಿ ಸಾಗಲಿದೆ ಎಂದು ಹೇಳಲಾಗಿದೆ. ಆದರೆ ಈರುಳ್ಳಿ ಸ್ಟಾಕ್‌ ಕಡಿಮೆ ಇರುವ ಈ ಸಂದರ್ಭದಲ್ಲಿ ಬೇರೆಡೆಯಿಂದ ಈರುಳ್ಳಿ ಸರಬರಾಜು ಮಾಡಿದರೆ ಬೆಲೆ ಇಳಿಯುವ ಭರವಸೆ ಇದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

Also Read  ಲೈನ್ ದುರಸ್ತಿ ವೇಳೆ ವಿದ್ಯುತ್ ಶಾಕ್- ಸಿಬ್ಬಂದಿಗೆ ಗಾಯ

error: Content is protected !!
Scroll to Top