ಹೊಸದಿಲ್ಲಿ, ಮೇ 13: 25 ರಿಂದ 100 ಕೋಟಿ ರೂಪಾಯಿ ವಹಿವಾಟು ನಡೆಸುವ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂ. ಸಾಲ ಹಾಗೂ 18 ಸಾವಿರ ಕೋಟಿ ರೂಪಾಯಿ ಆದಾಯ ತೆರಿಗೆಯನ್ನು ವಾಪಸ್ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೊರೋನ ವೈರಸ್ ಲಾಕ್‌ಡೌನ್ ಕಾರಣದಿಂದ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದ್ದು, ಈ ನಿಟ್ಟಿನಲ್ಲಿ ಸಮಾಜದ ವಿವಿಧ ವರ್ಗಗಳಿಗೆ ನಿನ್ನೆ ಪ್ರಧಾನಿ ಮೋದಿ ಅವರು 20 ಲಕ್ಷ ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಘೋಷಿಸಿದ್ದರು. ಈ ‘ಆರ್ಥಿಕ ಪ್ಯಾಕೇಜ್ ಸ್ವಾವಲಂಬಿ ಭಾರತವನ್ನು ನಿರ್ಮಿಸಲಿದೆ’ ಎಂದು ಹೇಳಿದರು. ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂ. ಸಾಲ ನೀಡುತ್ತಿದ್ದು, ಇದರಿಂದ 45 ಲಕ್ಷ ಸಣ್ಣ ಕಂಪನಿಗಳಿಗೆ ಅನುಕೂಲವಾಗಲಿದೆ ಎಂದರು.
ಅಕ್ಟೋಬರ್ 31ರ ವರೆಗೆ ಸಣ್ಣ ಕೈಗಾರಿಕೆಗಳು ಸಾಲ ಪಡೆಯಲು ಅವಕಾಶ ನೀಡಲಾಗಿದೆ. ಈ ಕಂಪನಿಗಳು ಪಡೆಯುವ ಸಾಲಕ್ಕೆ ಸರಕಾರವೇ ಗ್ಯಾರಂಟಿ ನೀಡಲಿದೆ. ಸಾಲ ಮರುಪಾವತಿಗೆ ನಾಲ್ಕು ವರ್ಷ ಕಾಲಾವಕಾಶ ನೀಡಲಾಗಿದ್ದು, ಒಂದು ವರ್ಷದವರಗೆ ಇಎಂಐ ವಿನಾಯಿತಿ ನೀಡಲಾಗುವುದು ಎಂದು ಸೀತಾರಾಮನ್ ತಿಳಿಸಿದರು. ಇದೇ ವೇಳೆ ತೆರಿಗೆದಾರರಿಗೆ ಬಂಪರ್ ಗಿಫ್ಟ್ ನೀಡಿದ ಸಚಿವೆ, 18 ಸಾವಿರ ಕೋಟಿ ರೂಪಾಯಿ ಆದಾಯ ತೆರಿಗೆಯನ್ನು ವಾಪಸ್ ನೀಡುವುದಾಗಿ ತಿಳಿಸಿದರು. 15 ಸಾವಿರ ರೂ. ಒಳಗಿನ ವೇತನದಾರರಿಗೆ ತಕ್ಷಣ ಇಪಿಎಫ್ ವಾಪಸ್ ನೀಡಲಾಗುವುದು. ಆಗಸ್ಟ್ ವರೆಗೆ ಇಪಿಎಫ್ ಹಣವನ್ನು ಸರಕಾರವೇ ಪಾವತಿಸಲಿದೆ ಎಂದು ಸೀತಾರಾಮನ್ ಹೇಳಿದ್ದಾರೆ.