ಹೊಸದಿಲ್ಲಿ, ಮಾ.16: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಅಪರಾಧಿಗಳು ಗಲ್ಲು ಶಿಕ್ಷೆಯಿಂದ ಪಾರಾಗಲು ಹುಡುಕುತ್ತಿರುವ ಎಲ್ಲಾ ದಾರಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ಬಂದ್ ಮಾಡಿದ್ದು, ಅಪರಾಧಿಗಳಿಗೆ ಮಾರ್ಚ್ 20ಕ್ಕೆ ನೇಣಿಗೇರುವುದು ಬಹುತೇಕ ಖಚಿತವಾಗಿದೆ.
ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬರಾದ ಮುಕೇಶ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ. ಅಲ್ಲದೆ ಅಪರಾಧಿಗಳ ಎಲ್ಲಾ ಕಾನೂನು ಅವಕಾಶಗಳು ಮುಗಿದಿದ್ದು, ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಈ ಮೂಲಕ ಗಲ್ಲುಶಿಕ್ಷೆ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ನಾಲ್ವರು ಅಪಾರಾಧಗಳಿಗೆ ಕಾನೂನು ತನ್ನ ಬಾಗಿಲನ್ನು ಬಂದ್ ಮಾಡಿದೆ.
20 ರಂದು ನಿರ್ಭಯಾ ಆರೋಪಿಗಳಿಗೆ ಮರಣದಂಡನೆ ವಿಧಿಸಿ ದೆಹಲಿ ಹೈಕೋರ್ಟ್ ಆದೇಶಿ ಹೊರಡಿಸಿದ ಬೆನ್ನಲ್ಲೇ ಪ್ರಕರಣದ ಆರೋಪಿ ಮುಕೇಶ್ ಮತ್ತೊಮ್ಮೆ ಸುಪ್ರೀಂಕೊರ್ಟ್ ಮೆಟ್ಟಿಲೇರಿದ್ದಾನೆ.
ತನಗೆ ವಿಧಿಸಲಾಗಿರುವ ಗಲ್ಲುಶಿಕ್ಷೆ ಕಾನೂನುಬಾಹಿರವಾಗಿದ್ದು, ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸುವಂತೆ ಕೋರಿ ಮುಕೇಶ್ ಸಿಂಗ್ ಸುಪ್ರೀಂಕೋರ್ಟ್’ಗೆ ಹೊಸದಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ್ದು, ನಾಲ್ವರೂ ಅಪರಾಧಿಗಳು ತಮ್ಮ ಕಾನೂನಾತ್ಮಕ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದೆ.