ಲಕ್ನೋ, ಜ.11: ಲಾರಿ ಮತ್ತು ಬಸ್ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡ ಹೊತ್ತಿ ಉರಿದಿದ್ದು, 20ಕ್ಕೂ ಹೆಚ್ಚು ಮಂದಿ ಸಜೀವ ದಹನವಾದ ಘಟನೆ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ 9:30 ರ ವೇಳೆಗೆ ಈ ದುರ್ಘಟನೆ ನಡೆದಿದ್ದು ಬಸ್ ನಲ್ಲಿ ಸುಮಾರು 46 ಪ್ರಯಾಣಿಕರು ಇದ್ದರು, ಘಟನೆ ನಡೆದ ವೇಳೆ 21 ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ. ಜೈಪುರಕ್ಕೆ ತೆರಳುತ್ತಿದ್ದ ಟ್ರಕ್ ಮತ್ತು ಖಾಸಗಿ ಸ್ಲೀಪರ್ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶದ ಕನೌಜ್ ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದ ಬಗ್ಗೆ ತಿಳಿದು ಬೇಸರವಾಯಿತು. ಈ ಅಪಘಾತದಲ್ಲಿ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾವನ್ನಪ್ಪಿದವರ ಕುಟುಂಬಕ್ಕೆ ನಾನು ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಆಸ್ಪತ್ರೆಗೆ ದಾಖಲಾದ 21 ಜನರು ಪ್ರಾಣಾಪಾಯದಿಂದ ಪಾರಾಗಿದ್ದು, ಬಸ್ ಮತ್ತು ಟ್ರಕ್ ನಲ್ಲಿ ಬೆಂಕಿಯನ್ನು ನಂಧಿಸಲಾಗಿದೆ. ಬಸ್ ನೊಳಗೆ ಸಿಲುಕಿದ್ದ ಉಳಿದ ಜನರು ಜೀವಂತವಾಗಿ ಉಳಿದಿಲ್ಲ ಎಂದು ಕಾನ್ಪುರ ಜನರಲ್ ಪೊಲೀಸ್ ಮೋಹಿತ್ ಅಗರವಾಲ್ ತಿಳಿಸಿದ್ದಾರೆ.
ಅಪಘಾತ ಸಂಭವಿಸಿ, ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದಾಗ ಬಸ್ ನಿಂದ 10 ರಿಂದ 12 ಜನರು ಮಾತ್ರ ಹೊರಬರಲು ಸಾಧ್ಯವಾಯಿತು.ಇತರರು ಬಸ್ ನೊಳಗೆ ಉಳಿದರು, ಬಸ್ ಸಂಪೂರ್ಣವಾಗಿ ತುಂಬಿ ತುಳುಕುತ್ತಿತ್ತು. ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಇನ್ನು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ