ಹೊಸದಿಲ್ಲಿ, ಡಿ.16: ದೇಶದ ಜನರ ಸಮಸ್ಯೆಗಳನ್ನು ಆಲಿಸುವಲ್ಲಿ ಮೋದಿ ಸರ್ಕಾರ ಹೇಡಿತನ ಮಾಡುತ್ತಿದೆ. ಅದನ್ನು ಪ್ರಶ್ನಿಸಿದ ಯುವಜನತೆಯ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ಮೇಲೆ ದಬ್ಬಾಳಿಕೆ ತೋರುತ್ತಿದೆ ಎಂದು ಆರೋಪಿಸಿದ್ದಾರೆ.
ನಿನ್ನೆ ಟ್ವೀಟ್ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿರುವ ಪ್ರಿಯಾಂಕಾ ಗಾಂಧಿ, ಮೋದಿ ಸರ್ಕಾರ ತನ್ನ ಸರ್ವಾಧಿಕಾರದ ಧೋರಣೆಯಿಂದ ದೇಶದ ಯುವಜನತೆಯ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ವಿಶ್ವವಿದ್ಯಾಲಯಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ ಹೊಡೆಯಲಾಗುತ್ತಿದೆ. ದೇಶದ ಯುವಜನತೆಯನ್ನು ನಡೆಸಿಕೊಳ್ಳುವ ರೀತಿ ಹೀಗೆಯೇ ಎಂದು ಕೇಳಿದ್ದಾರೆ.
ಜನರ ಸಮಸ್ಯೆಗಳನ್ನು ಮತ್ತು ಅಗತ್ಯಗಳನ್ನು ಸರ್ಕಾರ ಆಲಿಸಬೇಕಾದ ಸಂದರ್ಭದಲ್ಲಿ ಈಶಾನ್ಯ ರಾಜ್ಯ, ಉತ್ತರ ಪ್ರದೇಶ ಮತ್ತು ದೆಹಲಿಗಳಲ್ಲಿ ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಈ ಸರ್ಕಾರ ಅತ್ಯಂತ ಹೇಡಿ ಸರ್ಕಾರ ಎಂದು ಹ್ಯಾಶ್ ಟಾಗ್ ಶೇಮ್ ಎಂದು ಬಳಸಿದ್ದಾರೆ.