ಕಾಸರಗೋಡು, ಡಿ.6: ಇಲ್ಲಿನ ಕೆಎಸ್ಸಾರ್ಟಿಸಿ ಡಿಪೊದಲ್ಲಿ ಬಸ್ ಚಾಲಕರೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಆತ್ಮಹತ್ಯೆಗೈದವರನ್ನು ನೀಲೇಶ್ವರ ಪಳ್ಳಿಕೆರೆಯ ಪಿ.ವಿ. ಸುಕುಮಾರನ್ (48) ಎಂದು ಗುರುತಿಸಲಾಗಿದೆ. ಡಿ.5ರಂದು ರಾತ್ರಿ ಕಾಸರಗೋಡು ಕೆಎಸ್ಸಾರ್ಟಿಸಿ ಡಿಪೊದ ಒಂದನೇ ಮಹಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸುಕುಮಾರನ್ ಪತ್ತೆಯಾಗಿದ್ದು, ಇದನ್ನು ಗಮನಿಸಿದ ಉಳಿದ ಸಿಬ್ಬಂದಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅವರು ಬದುಕುಳಿಯಲಿಲ್ಲ ಎಂದು ತಿಳಿದು ಬಂದಿದೆ.
ವೇತನ ಮೊಟಕುಗೊಂಡಿರುವುದೇ ಕೃತ್ಯಕ್ಕೆ ಕಾರಣ ಎನ್ನಲಾಗಿದ್ದು, ಸುಕುಮಾರನ್‌ರ ತಂದೆ ಕೆಲ ದಿನಗಳ ಹಿಂದೆ ನಿಧನರಾಗಿದ್ದರು. 20 ದಿನಗಳ ರಜೆಯಲ್ಲಿ ತೆರಳಿ ಗುರುವಾರ ರಾತ್ರಿಯಷ್ಟೇ ಮತ್ತೆ ಕೆಲಸಕ್ಕೆ ಹಾಜರಾಗಿದ್ದರು. ಈ ಬಗ್ಗೆ ಕಾಸರಗೋಡು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.