ಬೆಂಗಳೂರಿನಿಂದ 5 ಹೊಸ ಮಾರ್ಗಗಳಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸೇವೆ ವಿಸ್ತರಣೆ!

(ನ್ಯೂಸ್‌ ಕಡಬ) newskadaba.com, ಅ. 10 .  ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ತನ್ನ ಚಳಿಗಾಲದ ವೇಳಾಪಟ್ಟಿಯಡಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊಸದಾಗಿ ಐದು ಮಾರ್ಗಗಳಿಗೆ ವಿಮಾನ ಸೇವೆಗಳನ್ನು ವಿಸ್ತರಿಸುವುದಾಗಿ ಘೋಷಿಸಿದೆ.

ಪ್ರಯಾಣಿಕರ ಬೇಡಿಕೆ ಮತ್ತು ಸಂಪರ್ಕವನ್ನು ಸುಧಾರಿಸುವ ಉದ್ದೇಶದಿಂದ ಈ ಹೊಸ ವಿಮಾನಗಳನ್ನು ಪರಿಚಯಿಸಲಾಗುತ್ತಿದ್ದು, ಇದು ಬೆಂಗಳೂರಿನಿಂದ ದೇಶ ಹಾಗೂ ವಿದೇಶಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ.

ಹೊಸ ವೇಳಾಪಟ್ಟಿಯ ಪ್ರಕಾರ, ಬೆಂಗಳೂರಿನಿಂದ ನೇಪಾಳದ ರಾಜಧಾನಿ ಕಠ್ಮಂಡು ನಗರಕ್ಕೆ ನೇರ ಅಂತರರಾಷ್ಟ್ರೀಯ ವಿಮಾನಯಾನ ಸೇವೆ ಆರಂಭವಾಗಲಿದೆ. ಇದರೊಂದಿಗೆ ದೇಶೀಯ ವಿಮಾನಯಾನ ಜಾಲವನ್ನು ಬಲಪಡಿಸಲು ಬೆಂಗಳೂರಿನಿಂದ ಕೊಯಮತ್ತೂರು, ಗೋವಾ (ಮೋಪಾ), ಜೋಧ್‌ಪುರ್ ಹಾಗೂ ಮಧುರೈ ನಗರಗಳಿಗೆ ಹೊಸದಾಗಿ ದೈನಂದಿನ ವಿಮಾನ ಸೇವೆಗಳನ್ನು ಆರಂಭಿಸಲಾಗುತ್ತಿದೆ. ಇದು ದಕ್ಷಿಣ ಭಾರತದ ಪ್ರಮುಖ ನಗರಗಳ ನಡುವಿನ ವ್ಯಾಪಾರ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಹೆಚ್ಚು ಸಹಕಾರಿಯಾಗಲಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಈ ಹೊಸ ಮಾರ್ಗಗಳ ಸೇರ್ಪದೆಯೊಂದಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ತನ್ನ ದೈನಂದಿನ ಒಟ್ಟು ವಿಮಾನಗಳ ಹಾರಾಟದ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಿದೆ. ಮುಂಬರುವ ಚಳಿಗಾಲದಲ್ಲಿ ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಹಾಗೂ ತಡೆರಹಿತ ವಿಮಾನಯಾನ ಸೌಲಭ್ಯ ಒದಗಿಸುವುದು ಸಂಸ್ಥೆಯ ಮುಖ್ಯ ಗುರಿಯಾಗಿದೆ.

Scroll to Top