ಕಡಬ: ಬಸ್ ಅಪಘಾತದಲ್ಲಿ ಮೃತಪಟ್ಟ ಹಿಂದೂ ಸಹೋದರ ➤ ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಮ್ ಸ್ನೇಹಿತರು ➤ ಜಾತಿ – ಧರ್ಮವನ್ನೂ ಮೀರಿ ಮೆರೆಯಿತು ಮಾನವೀಯತೆ

(ನ್ಯೂಸ್ ಕಡಬ) newskadaba.com ಕಡಬ, ಮಾ.20. ಕೆಎಸ್ಸಾರ್ಟಿಸಿ ಬಸ್ಸು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದ ಯುವಕನ ಮೃತದೇಹವನ್ನು ಮುಸ್ಲಿಂ ಯುವಕರೇ ಸೇರಿಕೊಂಡು ಸಾರ್ವಜನಿಕರ ನೆರವಿನೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಿದ ಘಟನೆ ಮಂಗಳವಾರದಂದು ಕಡಬದಲ್ಲಿ ನಡೆದಿದೆ.


ಮಾರ್ಚ್ 18 ಸೋಮವಾರದಂದು ಸುಬ್ರಹ್ಮಣ್ಯದಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಎಕ್ಸ್‌ಪ್ರೆಸ್ ಬಸ್ ಕಡಬ ಸಮೀಪದ ನೀರಾಜೆ ಎಂಬಲ್ಲಿ ರಸ್ತೆ ಬದಿ ನಿಂತಿದ್ದ ಯುವಕನಿಗೆ ಢಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡಿದ್ದ ಕಡಬ ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ದಿ| ಶ್ರೀನಿವಾಸ ಎಂಬವರ ಪುತ್ರ ಮಣಿಕಂಠ(35) ಪುತ್ತೂರು ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿದ್ದರು. ಮೃತ ಮಣಿಕಂಠ ತನ್ನ ಅಕ್ಕನ ಮನೆಯ ಪಕ್ಕದಲ್ಲೇ ಸಣ್ಣ ಗುಡಿಸಲಿನಲ್ಲಿ ವಾಸವಾಗಿದ್ದು, ಅಪಘಾತ ನಡೆದ ಸಮಯದಲ್ಲಿ ಆತನ ಅಕ್ಕ ಕೇರಳದಲ್ಲಿದ್ದರು. ಮೃತದೇಹವನ್ನು ಆತನ ಮುಸ್ಲಿಂ ಗೆಳೆಯರೇ ಆಸ್ಪತ್ರೆಯಿಂದ ಮನೆಗೆ ತೆಗೆದುಕೊಂಡು ಹೋಗಿದ್ದರು.

Also Read  ಇಂದು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ - ದೇಶಾದ್ಯಂತ ವಿಶೇಷ ಪೂಜೆ, ಸಂಭ್ರಮಾಚರಣೆ

ಮೃತದೇಹದ ಅಂತ್ಯಸಂಸ್ಕಾರವನ್ನು ಮುಸ್ಲಿಂ ಯುವಕರು ಹಿಂದೂ ಬಾಂಧವರ ಸಹಕಾರದೊಂದಿಗೆ ನೆರವೇರಿಸಿದ್ದು, ಮಂಗಳವಾರದಂದು ಕಡಬದ ಸಾರ್ವಜನಿಕ ರುದ್ರ ಭೂಮಿಯಲ್ಲಿ ಹಿಂದೂ ಸಂಪ್ರದಾಯದಂತೆ ಮೃತ ಮಣಿಕಂಠನ ಅಂತ್ಯ ಸಂಸ್ಕಾರವನ್ನು ವಿಧಿವತ್ತಾಗಿ ನೆರವೇರಿಸಲಾಯಿತು. ಈ ಕಾರ್ಯದಲ್ಲಿ ಅಬ್ಬಾಸ್ ಮರ್ಧಾಳ, ಹೈದರ್ ಹಿಂದುಸ್ಥಾನ್, ರಶೀದ್ ನಿಂತಿಕಲ್ಲು, ರಿಕ್ಷಾ ಚಾಲಕ ರಫೀಕ್, ಶಬೀರ್ ಪನ್ಯ ಸೇರಿದಂತೆ ಹಲವರು ಕೈ ಜೋಡಿಸಿದ್ದರು. ಹಿಂದೂ ಬಾಂಧವರಾದ ಸಂಜೀವ ಶೆಟ್ಟಿ ಹತ್ಯಡ್ಕ, ನಾರಾಯಣ ಶೆಟ್ಟಿ ಹತ್ಯಡ್ಕ, ಸುರೇಶ್ ನೈಲ, ರಾಜು ನೆಕ್ಕಿತ್ತಡ್ಕ ಹಾಗೂ ಮೃತ ವ್ಯಕ್ತಿಯ ಅಣ್ಣ ಮತ್ತು ಬಾವ ಸಹಕಾರ ನೀಡಿದರು.

Also Read  ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ವಿಧಿವಶ

error: Content is protected !!
Scroll to Top