(ನ್ಯೂಸ್ ಕಡಬ) newskadaba.com ಕಡಬ, ಜ.16. ರಾಷ್ಟ್ರ ರಕ್ಷಣೆ ಹಾಗೂ ಸೌಹಾರ್ದತೆಯ ಸಂಕಲ್ಪದೊಂದಿಗೆ ದೇಶಾದ್ಯಂತ ಕಾರ್ಯಾಚರಿಸುತ್ತಿರುವ ಎಸ್ಕೆಎಸ್ಸೆಫ್ ವತಿಯಿಂದ ಜಿಲ್ಲಾ ಮಟ್ಟದ ಮಾನವ ಸರಪಳಿ ಹಾಗೂ ಬೃಹತ್ ಸಮಾವೇಶವು ಜನವರಿ 26 ರಂದು ಕಡಬದ ಕಳಾರ ಶಂಸುಲ್ ಉಲಮಾ ನಗರದಲ್ಲಿ ನಡೆಯಲಿದೆ ಎಂದು ಎಸ್ಕೆಎಸ್ಸೆಫ್ ಜಿಲ್ಲಾಧ್ಯಕ್ಷ ಕಾಸೀಂ ದಾರಿಮಿ ಹೇಳಿದರು.
ಅವರು ಬುಧವಾರದಂದು ಕಡಬದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜನವರಿ 26ರಂದು ದೇಶಾದ್ಯಂತ 200 ಜಿಲ್ಲೆಗಳಲ್ಲಿ ಮಾನವ ಸರಪಳಿ ಕಾರ್ಯಕ್ರಮ ಹಾಗೂ ಸೌಹಾರ್ದ ಸಮಾವೇಶ ನಡೆಯಲಿದೆ. ಕಡಬದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ದ.ಕ. ಜಿಲ್ಲಾಮಟ್ಟದ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದ ಅವರು ರಾಷ್ಟ್ರದ ಸಂವಿಧಾನ ಅಪಾಯದಲ್ಲಿರುವ ಇಂದಿನ ಕಾಲಘಟ್ಟದಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ರಾಷ್ಟ್ರ ರಕ್ಷಣೆ ಹಾಗೂ ದೇಶಪ್ರೇಮವನ್ನು ಉದ್ದೀಪನೆಗೊಳಿಸುವ ಈ ಕಾರ್ಯಕ್ರಮದಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ಕಡಬ ಪೇಟೆಯ ಹಳೆಸ್ಟೇಶನ್‌ನಿಂದ ಕಳಾರ ತನಕ ಮಾನವ ಸರಪಳಿ ನಿರ್ಮಿಸಿ ಬೃಹತ್ ರ್ಯಾಲಿ ನಡೆಯಲಿದೆ. ಇದರಲ್ಲಿ ವಿಶೇಷವಾಗಿ ವಿವಿಧ ದಫ್ ಕಮಿಟಿ ವತಿಯಿಂದ ದಫ್ ಪ್ರದರ್ಶನ ನಡೆಯಲಿದೆ. ಈ ಮಾನವ ಸರಪಳಿ ಕಾರ್ಯಕ್ರಮದಲ್ಲಿ ವಿಖಾಯದ ಒಂದು ಸಾವಿರಕ್ಕೂ ಅಧಿಕ ಕಾರ್ಯಕರ್ತರು ವಿಶೇಷ ಆಕರ್ಷಣೆಯಾಗಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ ಕಾರ್ಯಕ್ರಮ ನಿಮಿತ್ತ ಶಂಸುಲ್ ಉಲಮಾ ನಗರದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಸಂಜೆ ನಡೆಯುವ ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ.
ದ.ಕ.ಜಿಲ್ಲಾ ಉಲಾಮ ಮುಶಾವರ ಇದರ ಅಧ್ಯಕ್ಷರಾದ ಶೈಖುನಾ ಎನ್.ಪಿ.ಎಂ. ಝೈನುಲ್ ಅಬಿದೀನ್ ತಂಙಲ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾ| ಗೀವರ್ಗೀಸ್ ಮಾರ್‌ಮಕ್ಕಾರಿಯೋಸ್, ಕೇಮಾರು ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ದಿನೇಶ್ ಗುಂಡುರಾವ್, ಜಿಲ್ಲಾ ಉಸ್ತುವಾರಿ ಮಾಜಿ ಸಚಿವ ಬಿ.ರಮಾನಾಥ ರೈ, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ| ಯು.ಟಿ. ಇಫ್ತಿಕಾರ್, ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್, ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ, ಕಡಬ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ, ಎಸ್ಕೆಎಸ್ಸೆಫ್ ಮುಖಂಡರಾದ ಅಮೀರ್ ತಂಙಳ್, ಇಸ್ಮಾಯಿಲ್ ಯಮಾನಿ, ಸಯ್ಯದ್ ಝುನೈದ್ ಝಫ್ರಿ ತಂಙಳ್ ಆತೂರು, ಸಯ್ಯದ್ ಅನಸ್ ಅಲ್ ಹಾದಿ ತಂಙಳ್ ಗಂಡಿಬಾಗಿಲು, ಕಡಬ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಇಬ್ರಾಹಿಂ ದಾರಿಮಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಎಸ್ಕೆಎಸ್ಸೆಫ್ ಕರ್ನಾಟಕ ರಾಜ್ಯ ಅಧ್ಯಕ್ಷ ಅನೀಸ್ ಕೌಸರಿ, ಕೇರಳದ ವೆಳ್ಳಮುಂಡ ಶೌಖತ್ ಅಲಿ ಸೇರಿದಂತೆ ಹಲವಾರು ಉಮಾರ, ಉಲಾಮ, ಶಿರೋಮಣಿಗಳು, ಧರ್ಮಗುರುಗಳು, ಧರ್ಮದರ್ಶಿಗಳು ಪ್ರಭಾಷಣ ಮಾಡಲಿದ್ದಾರೆ ಎಂದು ಎಸ್ಕೆಎಸ್ಸೆಫ್ ದ.ಕ.ಜಿಲ್ಲಾ ಅಧ್ಯಕ್ಷ ಕಾಸಿಂ ದಾರಿಮಿ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್ಕೆಎಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಸಿದ್ದೀಕ್ ಅಬ್ದುಲ್ ಖಾದರ್, ಕೋಶಾಧಿಕಾರಿ ಸಯ್ಯದ್ ಹಮೀದ್ ತಂಙಳ್, ಮಾನವ ಸರಪಳಿ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಅಶ್ರಫ್ ಶೇಡಿಗುಂಡಿ, ಕನ್ವೀನರ್ ಪುತ್ತುಮೋನು ಅನ್ನಡ್ಕ, ಪ್ರಮುಖರಾದ ಟಿ.ಎ.ಮಹಮ್ಮದ್, ಪಿ.ಎ. ಮರ್ದಾಳ, ಇ.ಕೆ.ಅಬ್ದುಲ್ ರಹಿಮಾನ್, ಎ.ಎಸ್.ಶರೀಫ್, ಕೆ.ಪಿ.ಎಂ.ಶರೀಪ್, ಶಫಿಯುಲ್ಲಾ ಮೊದಲಾದವರು ಉಪಸ್ಥಿತರಿದ್ದರು.