ಸಂಸದರ, ಕೇಂದ್ರ ಸಚಿವರುಗಳ ನಿರ್ಲಕ್ಷ್ಯದಿಂದಾಗಿ ಸಿಪಿಸಿಆರ್‍ಐ ಸ್ಥಳಾಂತರಗೊಳ್ಳುವ ಹಂತದಲ್ಲಿದೆ ► ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಲು ಬಿಡುವುದಿಲ್ಲ – ಮಾಜಿ ಸಚಿವ ರಮನಾಥ ರೈ

(ನ್ಯೂಸ್ ಕಡಬ) newskadaba.com ಕಡಬ, ಡಿ.07.  ಕಡಬ ತಾಲೂಕು ಕಿದು ಎಂಬಲ್ಲಿರುವ ಸಿಪಿಸಿಆರ್‍ಐ ಸಂಸ್ಥೆಯು ಸಂಸದರ, ಕೇಂದ್ರ ಸಚಿವರುಗಳ ನಿರ್ಲಕ್ಷದಿಂದ ಸ್ಥಳಾಂತರಗೊಳ್ಳುವ ಹಂತಕ್ಕೆ ಬಂದಿದ್ದು, ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಲು ಬಿಡವುದಿಲ್ಲ. ಸಂಸ್ಥೆಯನ್ನು ಉಳಿಸಿಕೊಳ್ಳಲು ಯಾವುದೇ ಹೋರಾಟಕ್ಕೂ ಕಾಂಗ್ರೆಸ್ ಸಿದ್ದವಾಗಿದೆ ಎಂದು ಮಾಜಿ ಸಚಿವ ರಮನಾಥ ರೈ ಹೇಳಿದರು.

ಅವರು ಬಿಳಿನೆಲೆ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ, ಜನ್ರತಿನಿಧಿಗಳ ಸಹಕಾರದಲ್ಲಿ ಸಿಪಿಸಿಆರ್‍ಐ ಸಂಸ್ಥೆಯ ಮುಂಭಾಗದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ದೇಶವನ್ನು ಆಳುತ್ತಿರುವ ಬಿಜೆಪಿಗರು ಬಂಡವಾಳ ಶಾಹಿಗಳ ಪರವಾಗಿದ್ದಾರೆ. ನಮಗೆಲ್ಲ ಅನ್ನ ನೀಡುವ ರೈತನನ್ನು ಮರೆತಿದ್ದಾರೆ. ದ.ಕ ಜಿಲ್ಲೆಗೆ ಈ ಹಿಂದಿನ ಕಾಂಗ್ರೆಸ್ ಸಂಸದರು ಅಪಾರ ಕೊಡುಗೆಯನ್ನು ನೀಡಿದ್ದಾರೆ. ಇದನ್ನು ಉಳಿಸಿಕೊಳ್ಳುವ ನೈತಿಕತೆ ಬಿಜೆಪಿಗರಿಗಿಲ್ಲ. ಯೋಜನೆಗಳ ಭರವಸೆ ನೀಡಿ ಜನರನ್ನು ಮಾನಸಿಕವಾಗಿ ಸೆಳೆಯುವ ವಿಫಲ ಪ್ರಯತ್ನ ನಡೆಸುತ್ತಿದ್ದಾರೆ. ಸಂಸ್ಥೆಯು ಸ್ಥಳಾಂತರವಾದಲ್ಲಿ ಸುಮಾರು 300 ಕ್ಕೂ ಹೆಚ್ಚು ಕಾರ್ಮಿಕರ ಜೀವನ ಡೋಲಯಮಾನವಾಗಲಿದೆ. ಇದೊಂದು ಸಾಂಕೇತಿಕ ಪ್ರತಿಭಟನೆಯಾಗಿದ್ದು, ಮುಂದಿನ ದಿನಗಳಲ್ಲಿ ಸಂಸ್ಥೆಯನ್ನು ಉಳಿಸಲು ಹಂತ ಹಂತವಾಗಿ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಎಚ್ಚರಿಕೆ ನೀಡಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಬಿ. ಸದಾಶಿವ ಮಾತನಾಡಿ, ಸಂಸ್ಥೆಯನ್ನು ಉಳಿಸಲು ಪಕ್ಷಾತೀತ ಹೋರಾಟಕ್ಕೆ ಜೆಡಿಎಸ್ ಕಟಿಬದ್ದವಾಗಿದೆ. ಮಾಜಿ ಪ್ರಧಾನಿ ದೇವೆಗೌಡ ಅವರಿಗೆ ಈ ಬಗ್ಗೆ ಮನವರಿಕೆ ಮಾಡಲಾಗಿದೆ. ಹೋರಾಟಕ್ಕೆ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು. ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿ.ಪಿ.ವರ್ಗಿಸ್, ಸರ್ವೋತ್ತಮ ಗೌಡ, ತಾಲೂಕು ಪಂಚಾಯಿತಿ ಸದಸ್ಯರಾದ ಗಣೇಶ್ ಕೈಕುರೆ, ಪಝಲ್ ಕೋಡಿಂಬಾಳ, ಉಷಾ ಅಂಚನ್, ಜೆಡಿಎಸ್ ಮುಖಂಡ ಸಯ್ಯದ್ ಮೀರಾ ಸಾಹೇಬ್, ಕಾಂಗ್ರೆಸ್ ಮುಖಂಡರಾದ ಆಶೋಕ್ ನೆಕ್ರಾಜೆ, ಡಾ.ರಘು, ಕೌಶಲ್ಯ ಶೆಟ್ಟಿ, ಶಶಿದರ ಬೊಟ್ಟಡ್ಕ, ದಿವಾಕರ ಗೌಡ ಶಿರಾಡಿ, ವಿಜಯ ಕುಮಾರ್ ರೈ ಕರ್ಮಾಯಿ, ಮನೋಜ್, ಗಜಾದರ ಮಲ್ಲಾರ, ಸುದೀರ್ ಕುಮಾರ್ ರೈ, ಬಾಲಕೃಷ್ಣ ಬಳ್ಳೇರಿ, ರೈತ ಮುಖಂಡ ವಿಕ್ಟರ್ ಲೂಯಿಸ್ ಮೊದಲಾದವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ಕಡಬ ಉಪತಹಶೀಲ್ದಾರ ನವ್ಯಾ ಅವರ ಮುಖಾಂತರ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿ ಪ್ರತಿಭಟನೆ ಹಿಂಪಡೆಯಲಾಯಿತು. ಬಿಳಿನೆಲೆ ಗ್ರಾಮ ಪಂಚಾಯಿತಿ ಅದ್ಯಕ್ಷೆ ಶಾರಾದ ದಿನೇಶ್ ಸ್ವಾಗತಿಸಿ, ವಂದಿಸಿದರು.

error: Content is protected !!

Join the Group

Join WhatsApp Group