(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.13. ತೀವ್ರ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕಿನ ಹಾನಿಗೀಡಾದ ಪ್ರದೇಶಗಳಿಗೆ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕೇಂದ್ರದಿಂದ ಆಗಮಿಸಿದ ತಂಡಕ್ಕೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸಮಗ್ರ ಮಾಹಿತಿ ನೀಡಿದರು. ನಗರಕ್ಕೆ ನೀರು ಪೂರೈಸುವ ತುಂಬೆ ಡ್ಯಾಮ್‍ನ ರೀಟೈನಿಂಗ್ ವಾಲ್ ಕುಸಿದಿರುವುದನ್ನು ಪರಿಶೀಲಿಸಿದರು. ಬಳಿಕ ಕೇಂದ್ರ ತಂಡವು ಮುಲ್ಲರ ಪಟ್ಣ ಸೇತುವೆ ಮುರಿದು ಬಿದ್ದಿರುವುದನ್ನು ಹಾಗೂ ಇದರಿಂದ ಸಂಭವಿಸಿದ ಸಂಪರ್ಕ ಕೊರತೆ ಹಾಗೂ ತಕ್ಷಣಕ್ಕೆ ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ಮಾಹಿತಿಯನ್ನು ಪಡೆದರು. ವಿಟ್ಲ ಪಡ್ನೂರ್ ಗ್ರಾಮದಲ್ಲಿ ಅಡಿಕೆ ಕೊಳೆ ರೋಗದಿಂದ ಸಂಭವಿಸಿರುವ ನಾಶ ನಷ್ಟದ ಮಾಹಿತಿ ಪಡೆದರು. ಕಾಣಿಯೂರಿನ ಅಡಿಕೆ ತೋಟಕ್ಕೂ ಭೇಟಿ ನೀಡಿದ ತಂಡ ಅಡಿಕೆ ಬೆಳೆಯ ಬಗ್ಗೆ ಮಾಹಿತಿಯನ್ನು ಪಡೆದರು. ಬಳಿಕ ಇಂದಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲಾಜೆ ಶಾಲೆ ಸಂಪರ್ಕ ರಸ್ತೆಯ ಬದಿ ಮಣ್ಣು ಕುಸಿತದಿಂದ ಆಗಿರುವ ಹಾನಿ ಪರಿಶೀಲಿಸಿದರು.
ಮಂಗಳೂರು ಬೆಂಗಳೂರಿನ ಸಂಪರ್ಕ ರಸ್ತೆ ಶಿರಾಡಿ ಘಾಟಿ ಪ್ರದೇಶದಲ್ಲಿ ಸಂಭವಿಸಿರುವ ಭೂಕುಸಿತವನ್ನು ತಂಡ ಪರಿಶೀಲಿಸಿದ ಬಳಿಕ ಹಾಸನದ ಸಕಲೇಶಪುರದಲ್ಲಿ ಸಂಭವಿಸಿರುವ ಅತಿವೃಷ್ಠಿ ಪರಿಶೀಲನೆಗೆ ತೆರಳಿತು. ಕೇಂದ್ರ ಆರ್ಥಿಕ ಸಚಿವಾಲಯದ ಉಪಕಾರ್ಯದರ್ಶಿ ಭರತೇಂದು ಕುಮಾರ್ ಸಿಂಗ್, ಭರತೇಂದು ಕುಮಾರ್ ಸಿಂಗ್, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಉಪ ಕಾರ್ಯದರ್ಶಿ ಮಾಣಿಕ್ ಚಂದ್ರ ಪಂಡಿತ್, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಪ್ರಾದೇಶಿಕ ಅಧಿಕಾರಿ ಸದಾನಂದ ಬಾಬು ಕೇಂದ್ರದ ನಿಯೋಗದಲ್ಲಿದ್ದರು. ಅಪರ ಜಿಲ್ಲಾಧಿಕಾರಿ ಕುಮಾರ್, ಪುತ್ತೂರು ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ, ಕೃಷಿ ಇಲಾಖೆಯ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ತೋಟಗಾರಿಕೆ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.