
(ನ್ಯೂಸ್ ಕಡಬ) newskadaba.com, ನ .07 . ಕೇರಳದ ಮಲೆಯತ್ತೂರು ಅರಣ್ಯ ವಿಭಾಗದಲ್ಲಿ 2025ರ ಏಪ್ರಿಲ್ 19ರಂದು ಆನೆಗಳ ಹಿಂಡಿನಿಂದ ಬೇರ್ಪಟ್ಟಿದ್ದ ಸುಮಾರು 130 ಕೆ.ಜಿ. ತೂಕದ ನವಜಾತ ಮರಿಯಾನೆಗೆ ‘ಮಾಯಾ’ ಎಂದು ಹೆಸರಿಡಲಾಗಿತ್ತು. ಅರಣ್ಯ ಸಿಬ್ಬಂದಿ ಕಳೆದ 18 ತಿಂಗಳಿಂದ ಇದನ್ನು ತಮ್ಮ ಸ್ವಂತ ಮಗುವಿನಂತೆ ಆರೈಕೆ ಮಾಡಿದ್ದರು.
2026ರ ಜುಲೈನಲ್ಲಿ ಆಟವಾಡುತ್ತ ಬಿದ್ದು ಭುಜಕ್ಕೆ ಗಾಯ ಮಾಡಿಕೊಂಡಿದ್ದ ಮಾಯಾಳ ಮೂಳೆಗಳು ತೀವ್ರವಾಗಿ ದುರ್ಬಲಗೊಂಡಿದ್ದವು. ಅಕ್ಟೋಬರ್ ವೇಳೆಗೆ ಕಾಲುಗಳಲ್ಲಿ ಮುರಿತ ಕಾಣಿಸಿಕೊಂಡು, ನಿಲ್ಲಲೂ ಆಗದೆ ದ್ರವ ಆಹಾರದ ಮೇಲೆ ಬದುಕುವ ಸ್ಥಿತಿ ನಿರ್ಮಾಣವಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಆಕೆಗೆ ಅಕ್ಟೋಬರ್ 29ರಂದು ವೈದ್ಯಕೀಯ ಮಂಡಳಿ ದಯಾಮರಣ ಶಿಫಾರಸು ಮಾಡಿತ್ತು.
ಅಸ್ಸಾಂನ ಆನೆ ತಜ್ಞ ಡಾ. ಕುಶಲ್ ಕೊನ್ವಾರ್ ಶರ್ಮಾ ಅವರ ಸಲಹೆಯಂತೆ, ಗುಜರಾತ್ನ ಜಾಮ್ನಗರದಲ್ಲಿರುವ ಅನಂತ್ ಅಂಬಾನಿ ಅವರ ವಂತಾರಾ ವನ್ಯಜೀವಿ ಚಿಕಿತ್ಸಾ ಕೇಂದ್ರದ ನೆರವು ಪಡೆಯಲಾಯಿತು. ನವೆಂಬರ್ 6ರಂದು ಜೀವ ರಕ್ಷಕ ಉಪಕರಣಗಳು ಮತ್ತು ವಿಶೇಷ ವೈದ್ಯಕೀಯ ತಂಡದೊಂದಿಗೆ ಮಾಯಾಳನ್ನು ವಿಶೇಷ ವಿಮಾನದ ಮೂಲಕ ವಂತಾರಾಗೆ ಕರೆತರಲಾಗಿದೆ.
ವಂತಾರಾದಲ್ಲಿ ತಜ್ಞ ಪಶುವೈದ್ಯರಿಂದ ವಿಶೇಷ ಚಿಕಿತ್ಸೆ ಮುಂದುವರಿದಿದ್ದು, ಚಿಕಿತ್ಸೆ ಪೂರ್ಣಗೊಂಡ ಬಳಿಕ ಮಾಯಾಳನ್ನು ಮರಳಿ ಕೇರಳದ ಅಭಯಾರಣ್ಯಕ್ಕೆ ಕಳುಹಿಸುವ ಉದ್ದೇಶ ಹೊಂದಲಾಗಿದೆ.




