
(ನ್ಯೂಸ್ ಕಡಬ) newskadaba.com, ನ. 07 ಕಡಬ, ನ.06. ಕಡಬ ತಾಲೂಕಿನಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘೋರ ಕೃತ್ಯವೊಂದು ಬೆಳಕಿಗೆ ಬಂದಿದ್ದು, ಪ್ರೇಮದ ಬಲೆಯಲ್ಲಿ ಸಿಲುಕಿಸಿ ಗರ್ಭಿಣಿಯಾಗಿದ್ದ ಯುವತಿಯನ್ನು ನಂಬಿಸಿ ಬಿಸಿಲೆ ಘಾಟಿ ಅರಣ್ಯಕ್ಕೆ ಕರೆದೊಯ್ದ ಆಕೆಯ ಪ್ರಿಯಕರ ಮಾರಣಾಂತಿಕ ಹಲ್ಲೆ ನಡೆಸಿ, ಸತ್ತುಹೋಗಿದ್ದಾಳೆಂದು ಭಾವಿಸಿ ರಸ್ತೆ ಬದಿಯ ಚರಂಡಿಗೆ ಎಸೆದು ಪರಾರಿಯಾಗಿದ್ದ ಘಟನೆ ನವೆಂಬರ್ 4ರಂದು ನಡೆದಿದೆ.ಸಾವು-ಬದುಕಿನ ನಡುವೆ ಹೋರಾಡಿ ಪ್ರಾಣಾಪಾಯದಿಂದ ಪಾರಾದ ಯುವತಿ ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸರು ಆರೋಪಿ ಯುವಕನನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಕಡಬ ತಾಲೂಕಿನ ಕೊಣಾಜೆ ಗ್ರಾಮದ ಪ್ರಸಾದ್ ಎಂಬ ಯುವಕ ಹಾಗೂ ಕಡಬ ತಾಲೂಕಿನ ಕೊಂಬಾರು ನಿವಾಸಿ ಯುವತಿಯ ನಡುವೆ ಕಳೆದ ಮೂರು ವರ್ಷಗಳಿಂದ ಪ್ರೇಮ ಸಂಬಂಧವಿತ್ತು ಎನ್ನಲಾಗಿದೆ. ಈ ಪ್ರೇಮ ಸಂಬಂಧದ ಹಿನ್ನೆಲೆಯಲ್ಲಿ ಯುವತಿ ಗರ್ಭಿಣಿಯಾಗಿದ್ದು, ಇತ್ತೀಚೆಗೆ ಆರೋಪಿ ಪ್ರಸಾದ್ಗೆ ಬೇರೆ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು ಎನ್ನಲಾಗಿದೆ. ಇದರಿಂದಾಗಿ ಗರ್ಭಿಣಿ ಪ್ರೇಯಸಿಯನ್ನು ತೊಡೆದುಹಾಕಲು ಸಂಚು ರೂಪಿಸಿದ್ದ ಪ್ರಸಾದ್, ನವೆಂಬರ್ 4ರ ಸೋಮವಾರ ಸಂಜೆ ಯುವತಿಯನ್ನು ಪುಸಲಾಯಿಸಿದ ಆಕೆಯನ್ನು ಉಪ್ಪಿನಂಗಡಿಯಿಂದ ಕಾರಿನಲ್ಲಿ ಕರೆದುಕೊಂಡು ಬಿಸಿಲೆ ಘಾಟಿಯ ನಿರ್ಜನ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪ್ರಸಾದ್ ಆಕೆಯ ಮೇಲೆ ಮನಬಂದಂತೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ರಭಸಕ್ಕೆ ಯುವತಿ ಪ್ರಜ್ಞೆ ತಪ್ಪಿ ಬಿದ್ದಾಗ ಆಕೆ ಪ್ರಾಣಬಿಟ್ಟಿದ್ದಾಳೆಂದು ನಂಬಿದ ಆರೋಪಿ ಆಕೆಯನ್ನು ರಸ್ತೆ ಬದಿಯ ಚರಂಡಿಗೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾನೆ.
ದಟ್ಟ ಅರಣ್ಯದ ಚಳಿಯಲ್ಲಿ ರಾತ್ರಿಯಿಡೀ ಚರಂಡಿಯಲ್ಲೇ ನರಳಾಡಿದ ಯುವತಿಗೆ ನವೆಂಬರ್ 5ರ ಬೆಳಿಗ್ಗೆ ಪ್ರಜ್ಞೆ ಬಂದಿದ್ದು, ತೀವ್ರ ಗಾಯಗಳ ನಡುವೆಯೂ ಧೈರ್ಯಗುಂದದ ಆಕೆ, ರಸ್ತೆಗೆ ಬಂದು ಆ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ ಹತ್ತಿ ನೇರವಾಗಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಆಗಮಿಸಿ ತನಗಾದ ಅನ್ಯಾಯ ಮತ್ತು ಕೊಲೆ ಯತ್ನದ ಕುರಿತು ದೂರು ನೀಡಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ತಕ್ಷಣವೇ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ಸಂತ್ರಸ್ತೆ ಹಾಗೂ ಆರೋಪಿ ಇಬ್ಬರೂ ಕುಕ್ಕೆ ಸುಬ್ರಹ್ಮಣ್ಯದ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡಿಕೊಂಡಿದ್ದರು. ಯುವತಿ ನೀಡಿದ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆಗಿಳಿದ ಸುಬ್ರಹ್ಮಣ್ಯ ಠಾಣಾ ಪೊಲೀಸರು, ನವೆಂಬರ್ 5ರಂದು ಸುಬ್ರಹ್ಮಣ್ಯದ ಖಾಸಗಿ ವಸತಿ ಗೃಹವೊಂದರಲ್ಲಿ ಕರ್ತವ್ಯದಲ್ಲಿದ್ದ ಆರೋಪಿ ಪ್ರಸಾದ್ನನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದ ಸ್ಥಳವು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಗೆ (ಬಿಸಿಲೆ ಘಾಟಿ) ಒಳಪಡುವುದರಿಂದ, ಸುಬ್ರಹ್ಮಣ್ಯ ಪೊಲೀಸರು ಆರೋಪಿಯನ್ನು ಯಸಳೂರು ಠಾಣಾ ಪೊಲೀಸರಿಗೆ ಮುಂದಿನ ಕಾನೂನು ಕ್ರಮಕ್ಕಾಗಿ ಹಸ್ತಾಂತರಿಸಿದ್ದಾರೆ.




