ಮದುವೆ ನಿರಾಕರಿಸಿದ್ದಕ್ಕೆ ₹42 ಲಕ್ಷ ಸುಲಿಗೆ! ಶಿಕ್ಷಕಿ ಸೇರಿ ಇಬ್ಬರು ಅರೆಸ್ಟ್

(ನ್ಯೂಸ್ ಕಡಬ) newskadaba.com, ಅ .30 . ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ ವ್ಯಕ್ತಿಯೊಬ್ಬರಿಗೆ ಬ್ಲ್ಯಾಕ್‌ಮೇಲ್ ಮಾಡಿ ಬರೋಬ್ಬರಿ ₹42.97 ಲಕ್ಷ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಶಿಕ್ಷಕಿ ಸೇರಿದಂತೆ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ನಾಗರತ್ನ ಎಚ್ (42) ಮತ್ತು ಹೇಮಂತ್ (41) ಎಂದು ಗುರುತಿಸಲಾಗಿದೆ. ಮ್ಯಾಟ್ರಿಮೋನಿ ಆ್ಯಪ್ ಮೂಲಕ ಪರಿಚಯವಾಗಿದ್ದ ಉಡುಪಿಯ ಪ್ರದೀಪ್ ಕೆ. ಅವರಿಗೆ ನಾಗರತ್ನ ಮದುವೆ ಪ್ರಸ್ತಾಪ ಮಾಡಿದ್ದರು. ಆದರೆ ಪ್ರದೀಪ್ ಅದನ್ನು ನಿರಾಕರಿಸಿದ್ದರು.
ನಂತರ ವೈಯಕ್ತಿಕ ಹಾಗೂ ಆರ್ಥಿಕ ಸಂಕಷ್ಟದ ನೆಪವೊಡ್ಡಿ ನಾಗರತ್ನ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣ ವರ್ಗಾಯಿಸಿಕೊಳ್ಳುತ್ತಿದ್ದಳು ಎನ್ನಲಾಗಿದೆ. 2024ರ ಜನವರಿಯಿಂದ 2026ರ ಜನವರಿವರೆಗೆ ಒಟ್ಟು ₹42,97,350 ಹಣ ವರ್ಗಾವಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಣ ವಾಪಸ್ ಕೇಳಿದಾಗ ಸುಳ್ಳು ಪೊಲೀಸ್ ದೂರು ದಾಖಲಿಸುವುದಾಗಿ, ಕೆಲಸದ ಸ್ಥಳದಲ್ಲಿ ಅವಮಾನಿಸುವುದಾಗಿ ಹಾಗೂ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ಆರೋಪಿಸಲಾಗಿದೆ.ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಕ್ಟೋಬರ್ 26ರಂದು ಬೆಂಗಳೂರಿನ ಬಸವೇಶ್ವರನಗರ ಮತ್ತು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Scroll to Top