ರಫೇಲ್ ಏರಿದ ಮಂಗಳೂರು ಪುತ್ರ! | ಫ್ಲೈಟ್ ಲೆಫ್ಟಿನೆಂಟ್ ಪ್ರಜ್ವಲ್ ಶೆಟ್ಟಿ ಸಾಧನೆ

(ನ್ಯೂಸ್‌ ಕಡಬ) newskadaba.com, ಅ .30 . ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹರೇಕಳದ ಫ್ಲೈಟ್ ಲೆಫ್ಟಿನೆಂಟ್ ಪ್ರಜ್ವಲ್ ಆರ್. ಶೆಟ್ಟಿ ಅವರು ಭಾರತೀಯ ವಾಯುಸೇನೆಯಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ದೇಶದ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನದ ಸಂಪೂರ್ಣ ಕಾರ್ಯಾಚರಣಾ ಪೈಲಟ್ ಆಗಿ ನೇಮಕಗೊಂಡು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

ಪಿಯುಸಿ ಬಳಿಕ ಯುಪಿಎಸ್‌ಸಿ ಪರೀಕ್ಷೆಯಲ್ಲಿ 42ನೇ ರ‍್ಯಾಂಕ್ ಪಡೆದು ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ ಆಯ್ಕೆಯಾಗಿದ್ದ ಪ್ರಜ್ವಲ್, ಎನ್‌ಡಿಎ ಹಾಗೂ ಏರ್ ಫೋರ್ಸ್ ಅಕಾಡೆಮಿಯಲ್ಲಿ ಕಠಿಣ ತರಬೇತಿ ಪೂರ್ಣಗೊಳಿಸಿದ್ದಾರೆ. ತರಬೇತಿಯ ವಿವಿಧ ಹಂತಗಳಲ್ಲಿ ವಿಮಾನಯಾನ ವಿಷಯಗಳಲ್ಲಿ ಪ್ರಥಮ ಸ್ಥಾನ ಗಳಿಸಿರುವುದು ಅವರ ಸಾಧನೆಯ ವಿಶೇಷತೆಯಾಗಿದೆ.

2022ರ ಡಿಸೆಂಬರ್‌ನಲ್ಲಿ ಯುದ್ಧ ವಿಮಾನ ವಿಭಾಗಕ್ಕೆ ನಿಯೋಜನೆಗೊಂಡ ಅವರು, ಇದೀಗ ಹರಿಯಾಣದ ಅಂಬಾಲಾದ 17ನೇ ಸ್ಕ್ವಾಡ್ರನ್ ‘ಗೋಲ್ಡನ್ ಆರೋಸ್’ನಲ್ಲಿ ರಫೇಲ್ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಕ್ಟೋಬರ್ 25ರಂದು ವಾರಣಾಸಿಯಲ್ಲಿ ನಡೆದ ‘ವಿಂಗ್ಸ್ ಓವರ್ ಗಂಗಾ’ ವೈಮಾನಿಕ ಪ್ರದರ್ಶನದಲ್ಲಿ ಮೂರು ರಫೇಲ್ ವಿಮಾನಗಳ ‘ನೀಲಕಂಠ’ ಫಾರ್ಮೇಷನ್‌ನಲ್ಲಿ ಪ್ರಮುಖ ಸ್ಥಾನದಲ್ಲಿ ಹಾರಾಟ ನಡೆಸಿದ್ದು ಅವರ ವೃತ್ತಿಜೀವನದ ಮತ್ತೊಂದು ಮಹತ್ವದ ಸಾಧನೆಯಾಗಿದೆ.ಹರೇಕಳ ಉಳಿದೊಟ್ಟು ರಮೇಶ್ ಶೆಟ್ಟಿ ಹಾಗೂ ಕೋಡೆತ್ತೂರು ಮೂಡುದೇವಸ್ಯ ಸೀತಾ ಆರ್. ಶೆಟ್ಟಿ ದಂಪತಿಯ ಪುತ್ರನಾಗಿರುವ ಪ್ರಜ್ವಲ್ ಅವರ ಸಾಧನೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಹೆಮ್ಮೆಯ ಕ್ಷಣವಾಗಿದೆ.

Scroll to Top