
(ನ್ಯೂಸ್ ಕಡಬ) newskadaba.com, ಅ .30 . ಮನೆಯಲ್ಲಿ ಅಣ್ಣಂದಿರೊಂದಿಗೆ ನಲಿಯುತ್ತಾ, ಪುಟ್ಟ ಹೆಜ್ಜೆಗಳನ್ನಿಡುತ್ತಾ ಸಂಭ್ರಮ ತುಂಬಬೇಕಿದ್ದ ಎರಡು ವರ್ಷದ ಕಂದಮ್ಮನ ಬದುಕು ದಿಢೀರ್ ಅಂತ್ಯಗೊಂಡಿದೆ. ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಗು ಅಕ್ಟೋಬರ್ 29ರಂದು ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕಫದ ಸಮಸ್ಯೆಯಿಂದ ಬಳಲುತ್ತಿದ್ದ ಮಗು ಅಕ್ಟೋಬರ್ 28ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು ಎನ್ನಲಾಗಿದೆ. ಚಿಕಿತ್ಸೆ ಬಳಿಕ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಮನೆಗೆ ಕರೆತರಲಾಗಿತ್ತು.
ಆದರೆ, ಮರುದಿನ ಮುಂಜಾನೆ ಎಂದಿನಂತೆ ಎದ್ದು ಕೆಲಕಾಲ ಆಟವಾಡುತ್ತಿದ್ದ ಮಗು, ಸ್ವಲ್ಪ ಹೊತ್ತಿನಲ್ಲೇ ದಿಢೀರ್ ಅಸ್ವಸ್ಥಗೊಂಡು ಕೊನೆಯುಸಿರೆಳೆದಿದೆ ಎಂದು ತಿಳಿದುಬಂದಿದೆ. ಎಳೆಯ ವಯಸ್ಸಿನಲ್ಲೇ ಕಂದಮ್ಮನನ್ನು ಕಳೆದುಕೊಂಡ ಕುಟುಂಬದವರ ದುಃಖ ಹೇಳತೀರದಾಗಿದೆ. ಪುಟ್ಟ ಮಗುವಿನ ಅಕಾಲಿಕ ನಿಧನ ಸ್ಥಳೀಯರಲ್ಲೂ ತೀವ್ರ ಶೋಕ ಮೂಡಿಸಿದೆ.




