
ನಾಲ್ಕೇ ತಿಂಗಳಲ್ಲಿ ಶೇ.30 ಏರಿಕೆ ಕಂಡ ಅಕ್ಕಿ ದರ!
(ನ್ಯೂಸ್ ಕಡಬ) newskadaba.com, ಅ. 29 . ಕಳೆದ 4 ತಿಂಗಳಲ್ಲಿ ಚಿಲ್ಲರೆ ಅಕ್ಕಿ ಬೆಲೆ ಏರಿಕೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದು, ಜೂನ್ನಲ್ಲಿ ಕೆಜಿಗೆ ₹52.11 ಇದ್ದ ಸರಾಸರಿ ಬೆಲೆ ಅಕ್ಟೋಬರ್ನಲ್ಲಿ ₹67.86ಕ್ಕೆ ಏರಿಕೆಯಾಗಿದೆ.ಸೋನಾ ಮಸೂರಿ ಹಳೆಯ ಅಕ್ಕಿ ದರ ಕೆಜಿಗೆ ₹82 – ₹98ಕ್ಕೆ ತಲುಪಿದೆ. ಜೀರಿಗೆ ಅಕ್ಕಿ ₹90 – ₹115 ಹಾಗೂ ಬುಲೆಟ್ ಅಕ್ಕಿ ಕೆಜಿಗೆ ಸುಮಾರು ₹95ರಂತೆ ಮಾರಾಟವಾಗುತ್ತಿದ್ದು, ಎಲ್ಲಾ ಪ್ರಮುಖ ತಳಿಗಳ ಬೆಲೆ ₹20 ರಿಂದ ₹30ರವರೆಗೆ ಹೆಚ್ಚಳ ಕಂಡಿದೆ.
ಮುಂಗಾರು ಮಳೆಯ ಕೊರತೆ, ಕೃಷ್ಣಾ-ತುಂಗಭದ್ರಾ ಹಾಗೂ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನೀರು ತಡವಾಗಿ ಬಿಡುಗಡೆಯಾಗಿರುವುದು, ಭತ್ತದ ಬಿತ್ತನೆ ಕುಸಿತ (10 ಲಕ್ಷ ಹೆಕ್ಟೇರ್ ಗುರಿಯಲ್ಲಿ ಕೇವಲ 4.87 ಲಕ್ಷ ಹೆಕ್ಟೇರ್ ಬಿತ್ತನೆ) ಮತ್ತು ಎಲ್ ನಿನೊ ಪರಿಣಾಮದಿಂದ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.




