ವಿಷಕಾರಿ ಅನಿಲ ಸೇವಿಸಿ ಮೂವರು ಮೀನುಗಾರರು ಮೃತ್ಯು

ತಲಾ 10 ಲಕ್ಷ ರೂ. ಪರಿಹಾರ ಘೋಷಣೆ

(ನ್ಯೂಸ್‌ ಕಡಬ) newskadaba.com, ಅ. 29 . ಗೋಕರ್ಣ ತದಡಿ ಮೀನುಗಾರಿಕಾ ಬಂದರಿನಲ್ಲಿ ಮೀನಿನ ತ್ಯಾಜ್ಯ ತೆರವುಗೊಳಿಸುವ ವೇಳೆ ವಿಷಗಾಳಿ ಸೇವಿಸಿ ಮೂವರು ಮೀನುಗಾರರು ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡಿಲಾಗಿದೆ.ಮೀನುಗಾರಿಕಾ ಸಚಿವ ಕೆ.ಎಸ್. ಬಸವಂತಪ್ಪ ಅವರು ಮೃತರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಈ ಸಂದರ್ಭ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರದ ಚೆಕ್ ಹಸ್ತಾಂತರಿಸಿದರು. ಮೃತರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದಾಗಿಯೂ ಭರವಸೆ ನೀಡಿದರು.

ತದಡಿ ಬಂದರಿನಲ್ಲಿ ನಿನ್ನೆ ಸಂಜೆ ಈ ದುರ್ಘಟನೆ ನಡೆದಿತ್ತು. ಹಿಡಿದ ಮೀನುಗಳನ್ನು ಬೋಟ್‌ನಿಂದ ಹೊರತೆಗೆದ ಬಳಿಕ, ಕೊಳೆತು ದುರ್ವಾಸನೆ ಬೀರುತ್ತಿದ್ದ ‘ಚಮನ್’ ಮೀನಿನ ತ್ಯಾಜ್ಯವನ್ನು ತೆರವುಗೊಳಿಸುವ ವೇಳೆ ಮೀನುಗಾರರು ವಿಷಕಾರಿ ಅನಿಲ ಗಾಳಿ ಸೇವಿಸಿ ಅಸ್ವಸ್ಥರಾಗಿದ್ದರು. ಈ ಪೈಕಿ ಮೂವರು ಸಾವನ್ನಪ್ಪಿದ್ದರು. ಮತ್ತಿಬ್ಬರು ಅಸ್ವಸ್ಥರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಗೆ ಕಾರಣವಾದ ಅಂಶಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಬಂದರಿನಲ್ಲಿ ಮೀನುಗಾರಿಕಾ ತ್ಯಾಜ್ಯ ತೆರವುಗೊಳಿಸುವ ಸಂದರ್ಭದಲ್ಲಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಗಮನಹರಿಸಲು ಸಚಿವರು ಸೂಚಿಸಿದ್ದಾರೆ.

Scroll to Top