ಉಳ್ಳಾಲ: ಶಾಲೆಗೆ ತೆರಳುತ್ತಿದ್ದ 9ನೇ ತರಗತಿ ಬಾಲಕಿ ಕಾರಿನಲ್ಲಿ ಅಪಹರಣ; ಬಾಗಲಕೋಟೆ ಯುವಕ ಸೆರೆ!

(ನ್ಯೂಸ್‌ ಕಡಬ) newskadaba.com, ಅ. 29 . ಶಾಲೆಗೆ ತೆರಳುತ್ತಿದ್ದ 9ನೇ ತರಗತಿಯ ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಅಪಹರಿಸಿದ ಆರೋಪದ ಮೇಲೆ ಬಾಗಲಕೋಟೆ ಜಿಲ್ಲೆಯ 23 ವರ್ಷದ ಯುವಕನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ರಾತ್ರಿ ಸೋಮೇಶ್ವರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ಬಾಲಕಿಯನ್ನು ರಕ್ಷಿಸಲಾಗಿದೆ. ಬಂಧಿತನನ್ನು ಬಾಗಲಕೋಟೆ ಜಿಲ್ಲೆಯ ಮೇಸ್ತ್ರಿ ಗೂಡುಸಾಬ್ ಅಲಿಯಾಸ್ ಆಶಿಫ್ (23) ಎಂದು ಗುರುತಿಸಲಾಗಿದೆ.

ಬಾಗಲಕೋಟೆ ಮೂಲದ ಕುಟುಂಬವೊಂದು ಉಳ್ಳಾಲ ತಾಲೂಕಿನ ಕಲ್ಲಾಪು ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಕುಟುಂಬದ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳು ಸಮೀಪದ ಕನ್ನಡ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮಂಗಳವಾರ ಬೆಳಗ್ಗೆ ಪೋಷಕರು ಎಂದಿನಂತೆ ಇಬ್ಬರು ಮಕ್ಕಳನ್ನೂ ಶಾಲೆಗೆ ಕಳುಹಿಸಿದ್ದರು. ಆದರೆ, ಬಳಿಕ ಶಿಕ್ಷಕರು ಪೋಷಕರಿಗೆ ಕರೆ ಮಾಡಿ, ಸಹೋದರಿಯರಲ್ಲಿ ಹಿರಿಯ ಬಾಲಕಿ ಶಾಲೆಗೆ ಬಂದಿಲ್ಲ ಎಂದು ಮಾಹಿತಿ ನೀಡಿದರು. ಇದರಿಂದ ಆತಂಕಗೊಂಡ ಪೋಷಕರು ಬಾಲಕಿಗಾಗಿ ಹುಡುಕಾಟ ಆರಂಭಿಸಿದರು.

ಕಾಣೆಯಾದ ಬಾಲಕಿ ಈ ಹಿಂದೆಯೇ ತನ್ನ ತಾಯಿಗೆ ಆರೋಪಿ ಗೂಡುಸಾಬ್ ಅಲಿಯಾಸ್ ಆಶಿಫ್ ಶಾಲೆಯ ಬಳಿ ತನ್ನನ್ನು ಹಿಂಬಾಲಿಸುತ್ತಿದ್ದಾನೆ ಹಾಗೂ ಮಾತನಾಡಲು ಪ್ರಯತ್ನಿಸುತ್ತಿದ್ದಾನೆ ಎಂದು ತಿಳಿಸಿದ್ದಳು ಎನ್ನಲಾಗಿದೆ. ಈ ಕುರಿತು ಆರೋಪಿಗೆ ಎಚ್ಚರಿಕೆ ನೀಡಲಾಗಿತ್ತು ಎಂದು ವರದಿಯಾಗಿದೆ. ಆದರೂ, ಆರೋಪಿ ಬಾಲಕಿಯನ್ನು ಆಮಿಷವೊಡ್ಡಿ ಕಾರಿನಲ್ಲಿ ಕರೆದೊಯ್ದು ಅಪಹರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಮಂಗಳವಾರ ಸಂಜೆ ಬಾಲಕಿಯ ತಾಯಿ ಉಳ್ಳಾಲ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಮಗಳನ್ನು ಪತ್ತೆಹಚ್ಚಿ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಮಂಗಳವಾರ ರಾತ್ರಿ ಸೋಮೇಶ್ವರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ಬಾಲಕಿಯನ್ನು ರಕ್ಷಿಸಿದರು. ಬಾಲಕಿಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದು, ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ವರದಿಯಾಗಿದೆ.

Scroll to Top