ಫರಂಗಿಪೇಟೆ ಸ್ಟುಡಿಯೋ ಮಾಲೀಕರ ಮೇಲೆ ಹಲ್ಲೆ ಯತ್ನ: ನಾಲ್ವರು ಅಪರಾಧಿಗಳಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ!

(ನ್ಯೂಸ್‌ ಕಡಬ) newskadaba.com, ಅ. 29 . ಮಂಗಳೂರು: ಬಂಟ್ವಾಳದ ಫರಂಗಿಪೇಟೆಯಲ್ಲಿ ಸ್ಟುಡಿಯೋ ಮಾಲೀಕರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಕುಖ್ಯಾತ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 7 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಒಟ್ಟು ₹88,000 ದಂಡ ವಿಧಿಸಿ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

2020ರ ಅಕ್ಟೋಬರ್ 28ರಂದು ಸಂಜೆ ಫರಂಗಿಪೇಟೆಯಲ್ಲಿ ಸ್ಟುಡಿಯೋ ಮಾಲೀಕ ದಿನೇಶ್ ಅವರು ತಮ್ಮ ಸ್ಟುಡಿಯೋದಲ್ಲಿದ್ದ ವೇಳೆ, ಪೂರ್ವದ್ವೇಷದ ಹಿನ್ನೆಲೆಯಲ್ಲಿ ನುಗ್ಗಿದ ನಾಲ್ವರು ದುಷ್ಕರ್ಮಿಗಳು ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು.

ಮಹಮ್ಮದ್ ಸೈಫುದಿನ್, ಮಹಮ್ಮದ್ ಅರ್ಷಾದ್, ಅಬ್ದುಲ್ ರಹಿಮಾನ್ ಅಲಿಯಾಸ್ ಮುನ್ನಿ ಮತ್ತು ಮಹಮ್ಮದ್ ಸವಾದ್ ಶಿಕ್ಷೆಗೊಳಗಾದ ಅಪರಾಧಿಗಳು.ಅಂದಿನ ಬಂಟ್ವಾಳ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕ ಪ್ರಸನ್ನ ಎಂ.ಎಸ್. ಅವರು ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು ಐಪಿಸಿ ಕಲಂ 307, 324, 326, 504, 506 ಹಾಗೂ 34ರ ಅಡಿಯಲ್ಲಿ ಅಪರಾಧ ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜ್ಯೋತಿ ನಾಯಕ್ ವಾದ ಮಂಡಿಸಿದ್ದರು.

Scroll to Top