
(ನ್ಯೂಸ್ ಕಡಬ) newskadaba.com, ಅ.09 ಮಂಗಳೂರು: ನಕಲಿ ಪಾಸ್ಪೋರ್ಟ್ ಬಳಸಿ ವಿದೇಶಕ್ಕೆ ಹಾರಲು ಯತ್ನಿಸಿ, ಬಳಿಕ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಾಸರಗೋಡು ಮೂಲದ ಆರೋಪಿಯನ್ನು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವೇಲಾಯುಧನ್ (54) ಎಂದು ಗುರುತಿಸಲಾಗಿದೆ.
2010 ಜೂನ್ 22ರಂದು ಬಜಪೆ ವಿಮಾನ ನಿಲ್ದಾಣದ ಮೂಲಕ ನಕಲಿ ಪಾಸ್ಪೋರ್ಟ್ನಲ್ಲಿ ವಿದೇಶಕ್ಕೆ ತೆರಳಲು ಯತ್ನಿಸಿದ್ದಾಗ ಇಮಿಗ್ರೇಷನ್ ಅಧಿಕಾರಿಗಳು ಈತನನ್ನು ವಶಕ್ಕೆ ಪಡೆದು ಬಜಪೆ ಠಾಣೆಗೆ ಹಸ್ತಾಂತರಿಸಿದ್ದರು.2020 ಸೆಷನ್ಸ್ ನ್ಯಾಯಾಲಯವು ವಿಚಾರಣೆ ನಡೆಸಿ ಆರೋಪಿಗೆ 1 ವರ್ಷ 6 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು.
ಈ ಶಿಕ್ಷೆಯನ್ನು ಪ್ರಶ್ನಿಸಿ ಆರೋಪಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.ಹೈಕೋರ್ಟ್ ಅರ್ಜಿ ತಿರಸ್ಕರಿಸಿದ ಬಳಿಕ 2020ರಿಂದ ತಲೆಮರೆಸಿಕೊಂಡಿದ್ದ ಈತನನ್ನು ಅಕ್ಟೋಬರ್ 8ರಂದು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿ, ಮುಂದಿನ ಕ್ರಮಕ್ಕಾಗಿ ಬಜಪೆ ಠಾಣೆಗೆ ಹಸ್ತಾಂತರಿಸಿದ್ದಾರೆ.




