
(ನ್ಯೂಸ್ ಕಡಬ) newskadaba.com, ಸೆ.26 . ರಾಜ್ಯ ಸರ್ಕಾರ ಪ್ರಕಟಿಸಿರುವ ₹2,500 ಬರ ಪರಿಹಾರ ಸಾಲದು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.
ದಿನಗೂಲಿ ಕಾರ್ಮಿಕರ ದಿನನಿತ್ಯದ ಸಂಬಳವೇ ₹1,000ಕ್ಕೂ ಹೆಚ್ಚಿರುವಾಗ, ರೈತರಿಗೆ ಕೇವಲ ₹2,500 ಇನ್ಪುಟ್ ಸಬ್ಸಿಡಿ ನೀಡಿ ಸರ್ಕಾರ ಕೈತೊಳೆದುಕೊಂಡಿರುವುದು ಖಂಡನೀಯ ಎಂದು ಅವರು ‘ಎಕ್ಸ್’ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೈತರಿಗೆ ನ್ಯಾಯ ಸಿಗಬೇಕಾದರೆ ಸರ್ಕಾರ ತಕ್ಷಣವೇ ಅವರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರು ರಾಜ್ಯದ 46 ರಿಂದ 50 ಲಕ್ಷ ರೈತರಿಗೆ ತಲಾ ₹2,500 ಇನ್ಪುಟ್ ಸಬ್ಸಿಡಿ ನೀಡುವುದಾಗಿ ಘೋಷಿಸಿದ್ದರು. ರಾಜ್ಯದಲ್ಲಿ 40 ಸಾವಿರ ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ಬೆಳೆ ನಷ್ಟ ಸಂಭವಿಸಿದ್ದು, ಈ ಪರಿಹಾರಕ್ಕಾಗಿ ₹1,250 ಕೋಟಿ ವೆಚ್ಚ ಮಾಡಲಾಗುತ್ತಿದೆ. ಅಲ್ಲದೆ, ರಾಜ್ಯದ ಬರ ಪರಿಸ್ಥಿತಿಯನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸುವಂತೆ ಕೋರಲು ಶೀಘ್ರದಲ್ಲೇ ಪ್ರಧಾನಮಂತ್ರಿಗಳನ್ನು ನಿಯೋಗದೊಂದಿಗೆ ಭೇಟಿಯಾಗುವುದಾಗಿ ತಿಳಿಸಿದ್ದರು




