ಕಾಂಗೋದಲ್ಲಿ ಭೀಕರ ವಿಮಾನ ಅಪಘಾತ: ಇಬ್ಬರು ಉನ್ನತ ಸೇನಾ ಅಧಿಕಾರಿಗಳು ಸೇರಿ 14 ಮಂದಿ ದುರ್ಮರಣ

(ನ್ಯೂಸ್‌ ಕಡಬ) newskadaba.com, ಸೆ.26 . ಕಾಂಗೋ ದೇಶದಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಇಬ್ಬರು ಉನ್ನತ ಸೇನಾ ಅಧಿಕಾರಿಗಳು ಸೇರಿದಂತೆ ಒಟ್ಟು 14 ಜನರು ದುರ್ಮರಣಕ್ಕೀಡಾಗಿದ್ದಾರೆ.

ಮಿಲಿಟರಿ ಕೋರ್ಟ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮುಟೊಂಬೊ ಕಟಲಾಯಿ ಟಿಯೆಂಡೆ ಹಾಗೂ ಸಶಸ್ತ್ರ ಪಡೆಗಳ ಆಡಿಟರ್ ಜನರಲ್ ಲೆಫ್ಟಿನೆಂಟ್ ಜನರಲ್ ಬಕುಮಿ ಲಿಕುಲಿಯಾ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನಿಯೋಗದ 12 ಸದಸ್ಯರು ಹಾಗೂ ವಿಮಾನದ ಸಿಬ್ಬಂದಿ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸೇನಾ ವಕ್ತಾರ ಮೇಜರ್ ಜನರಲ್ ಎಫೋಮಿ ಎಕೆಂಗೆ ದೃಢಪಡಿಸಿದ್ದಾರೆ.

ನೈರುತ್ಯ ಕಾಂಗೋದ ಕಿಕ್ವಿಟ್‌ನಿಂದ ರಾಜಧಾನಿ ಕಿನ್ಶಾಸಾಗೆ ಪ್ರಯಾಣಿಸುತ್ತಿದ್ದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡು ಕೆಂಗೆ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ. ವಿಮಾನದಲ್ಲಿದ್ದ ಯಾರೂ ಬದುಕುಳಿದಿಲ್ಲ. ದುರಂತದ ನಿಖರ ಕಾರಣ ತಿಳಿಯಲು ನಾಗರಿಕ ವಿಮಾನಯಾನ ಪ್ರಾಧಿಕಾರ ಹಾಗೂ ಸೇನೆ ತನಿಖೆ ಆರಂಭಿಸಿವೆ.

Scroll to Top