ಮೈಕ್ರೋಸಾಫ್ಟ್‌ನಲ್ಲಿ ಬೃಹತ್ ಉದ್ಯೋಗ ಕಡಿತ – ಭಾರತ ಸೇರಿ 4 ದೇಶಗಳ 60 ಸಾವಿರ ಸಿಬ್ಬಂದಿಗೆ ಸ್ವಯಂಪ್ರೇರಿತ ನಿರ್ಗಮನ ಆಫರ್

(ನ್ಯೂಸ್‌ ಕಡಬ) newskadaba.com, ಅ. 27 . ಕೃತಕ ಬುದ್ಧಿಮತ್ತೆ ಮೂಲಸೌಕರ್ಯಗಳ ಮೇಲೆ ಬೃಹತ್ ಬಂಡವಾಳ ಹೂಡಿಕೆ ಮಾಡುತ್ತಿರುವ ಟೆಕ್ ದೈತ್ಯ ಮೈಕ್ರೋಸಾಫ್ಟ್, ವೆಚ್ಚ ನಿಯಂತ್ರಣದ ಭಾಗವಾಗಿ ಭಾರತ, ಅಮೆರಿಕ, ಬ್ರಿಟನ್ ಹಾಗೂ ಕೆನಡಾದಲ್ಲಿನ ತನ್ನ ಅರ್ಹ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿರ್ಗಮನದ ಆಫರ್ ಪ್ರಕಟಿಸಿದೆ. ಈ ಯೋಜನೆಯು ಜಾಗತಿಕ ಕಾರ್ಯಪಡೆಯ ಶೇ.25ರಷ್ಟು, ಅಂದರೆ ಸುಮಾರು 60,000 ಸಿಬ್ಬಂದಿಯನ್ನು ಒಳಗೊಳ್ಳುವ ಸಾಧ್ಯತೆಯಿದೆ.

ಲೆವೆಲ್ 70 ಮತ್ತು ಅದಕ್ಕಿಂತ ಕೆಳಗಿನ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಈ ಅವಕಾಶವಿದ್ದು, ಎಐ ಎಕ್ಸ್‌ಪೀರಿಯನ್ಸಸ್, ಕೊಪೈಲಟ್, ಹಣಕಾಸು ಮತ್ತು ಎಕ್ಸ್‌ಬಾಕ್ಸ್ ವಿಭಾಗಗಳ ಉದ್ಯೋಗಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಬದಲಾಗುತ್ತಿರುವ ತಂತ್ರಜ್ಞಾನ ಅಗತ್ಯಗಳಿಗೆ ತಕ್ಕಂತೆ ಮಾನವ ಸಂಪನ್ಮೂಲವನ್ನು ಮರುಹೊಂದಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯ ಸಿಬ್ಬಂದಿ ಅಧಿಕಾರಿ ಎಮಿ ಕೋಲ್‌ಮನ್ ತಿಳಿಸಿದ್ದಾರೆ.

Scroll to Top