
(ನ್ಯೂಸ್ ಕಡಬ) newskadaba.com, ಸೆ.26 . ಮೇಯಿಸಲು ಕರೆದೊಯ್ಯುತ್ತಿದ್ದಾಗ ವೇಗವಾಗಿ ಬಂದ ಡೆಮು ರೈಲು ಡಿಕ್ಕಿ ಹೊಡೆದು 8 ಎಮ್ಮೆಗಳು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಸಮೀಪ ನಡೆದಿದೆ.
ಮರಿಯಮ್ಮನಹಳ್ಳಿ ನಿವಾಸಿ ಕಾಳಪ್ಪ ಎಂಬುವವರು ತಮ್ಮ ಎಮ್ಮೆಗಳನ್ನು ಮೇಯಿಸಲು ಕರೆದೊಯ್ದು, ರೈಲ್ವೆ ಹಳಿ ದಾಟಿಸುವಾಗ ಈ ಅಪಘಾತ ಸಂಭವಿಸಿದೆ.ಹೈನುಗಾರಿಕೆಯನ್ನೇ ಜೀವನೋಪಾಯ ಮಾಡಿಕೊಂಡಿದ್ದ ಕಾಳಪ್ಪ ಕುಟುಂಬವು, ದಿನನಿತ್ಯದ ಆದಾಯಕ್ಕೆ ಆಧಾರವಾಗಿದ್ದ ಎಂಟೂ ಎಮ್ಮೆಗಳನ್ನು ಕಳೆದುಕೊಂಡು ತೀವ್ರ ಆಘಾತಕ್ಕೊಳಗಾಗಿದೆ.
ಏಕಾಏಕಿ ಸಂಭವಿಸಿದ ದುರಂತದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಸ್ಥರು, ಸರ್ಕಾರ ಹಾಗೂ ರೈಲ್ವೆ ಇಲಾಖೆ ತಕ್ಷಣ ಸೂಕ್ತ ಪರಿಹಾರ ನೀಡಬೇಕೆಂದು ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ.ಘಟನಾ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




