ಗರ್ಭಿಣಿಯರಿಗೆ ‘ತಾಯಿ ಕಾರ್ಡ್’ ಕಡ್ಡಾಯ: ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ

(ನ್ಯೂಸ್‌ ಕಡಬ) newskadaba.com, ಸೆ.26 .  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗರ್ಭಿಣಿಯರು ಸ್ಕ್ಯಾನಿಂಗ್ ಕೇಂದ್ರಗಳಿಗೆ ಭೇಟಿ ನೀಡುವಾಗ ಕಡ್ಡಾಯವಾಗಿ ‘ತಾಯಿ ಕಾರ್ಡ್‘ ಪಡೆದುಕೊಳ್ಳಬೇಕು ಮತ್ತು ಅದನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ತಿಳಿಸಿದ್ದಾರೆ.

ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ನಡೆದ PCPNDT (ಜನನಪೂರ್ವ ಲಿಂಗ ನಿರ್ಣಯ ಪ್ರತಿಬಂಧಕ) ಕಾಯ್ದೆ-1994ರ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.ತಾಯಿಯ ಆರೋಗ್ಯವನ್ನು ಸಕಾಲದಲ್ಲಿ ಪರಿಶೀಲಿಸಲು ಹಾಗೂ ಅಗತ್ಯ ವೈದ್ಯಕೀಯ ಸೇವೆಗಳನ್ನು ಒದಗಿಸಲು ‘ತಾಯಿ ಕಾರ್ಡ್’ ಅತ್ಯಗತ್ಯ.

ತಾಯಿ ಕಾರ್ಡ್ ಇಲ್ಲದವರು ಹತ್ತಿರದ ಸರ್ಕಾರಿ ಪ್ರಾಥಮಿಕ/ನಗರ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಅಥವಾ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಪಡೆಯಬಹುದು.ಜಿಲ್ಲೆಯ ಸ್ಕ್ಯಾನಿಂಗ್ ಕೇಂದ್ರಗಳು PCPNDT ಕಾಯ್ದೆಯನ್ನು ಸರಿಯಾಗಿ ಪಾಲಿಸುತ್ತಿವೆಯೇ ಎಂದು ನಿಯಮಿತವಾಗಿ ಪರಿಶೀಲಿಸಲು ಮತ್ತು ನಿಯಮ ಉಲ್ಲಂಘಿಸುವ ಕೇಂದ್ರಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಸಭೆಯಲ್ಲಿ PNDT ಸಲಹಾ ಸಮಿತಿ ಅಧ್ಯಕ್ಷೆ ಡಾ. ಅಮೃತ ಭಂಡಾರಿ ಹಾಗೂ ತಪಾಸಣಾ ಸಮಿತಿ ಸದಸ್ಯೆ ಡಾ. ಸುಂದರಿ ಉಪಸ್ಥಿತರಿದ್ದರು.

Scroll to Top