
(ನ್ಯೂಸ್ ಕಡಬ) newskadaba.com, ಸೆ. 23 . ತಮ್ಮ ಜಮೀನಿನ ಹಕ್ಕುಪತ್ರ ಹಾಗೂ ಪ್ರಮುಖ ದಾಖಲೆಗಳಿಗಾಗಿ ಕಳೆದ 27 ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆದು ಬೇಸತ್ತ 74 ವರ್ಷದ ವೃದ್ಧರೊಬ್ಬರು ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ನಾಟಕೀಯ ಘಟನೆ ನಡೆದಿದೆ.
ಬದಿಯಡ್ಕದ ಮಾಜಿ ಸ್ಟುಡಿಯೋ ಮಾಲೀಕ, ನಾರಂಪಾಡಿ ನಿವಾಸಿ ಪಿ. ಕೆ. ಮೋಹನ್‌ದಾಸ್ (74).ಕೈಯಲ್ಲಿ ಪೆಟ್ರೋಲ್ ಬಾಟಲಿ ಹಾಗೂ ಕುತ್ತಿಗೆಗೆ ನೇಣಿನ ಕುಣಿಕೆ ಹಾಕಿಕೊಂಡು ಟವರ್ ಏರಿದ ಮೋಹನ್‌ದಾಸ್, ಯಾರಾದರೂ ಹತ್ತಿರ ಬಂದರೆ ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು.

ಸ್ಥಳಕ್ಕೆ ಬಂದ ಬದಿಯಡ್ಕ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ, ಫೋನ್ ಕರೆ ಮಾಡಿ ಅವರ ಗಮನ ಬೇರೆಡೆ ಸೆಳೆದು, ಸುಮಾರು 3 ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಮೋಹನ್‌ದಾಸ್ ಅವರು ಟವರ್ ಹಾಗೂ ಮರ ಏರಿ ಪ್ರತಿಭಟನೆ ನಡೆಸುತ್ತಿರುವುದು ಇದು ಐದನೇ ಬಾರಿಯಾಗಿದೆ. (2018ರಲ್ಲಿ ಡೆಪ್ಯುಟಿ ಕಮಿಷನರ್ ಕಚೇರಿ ಆವರಣದ ಟವರ್ ಏರಿದ್ದರು.

ಅಧಿಕಾರಿಗಳು ಪದೇ ಪದೇ ನೀಡಿದ ಭರವಸೆ ಈಡೇರದ ಕಾರಣ ವೃದ್ಧ ಈ ತೀವ್ರ ನಿರ್ಧಾರಕ್ಕೆ ಮುಂದಾಗಿದ್ದರೆಂದು ತಿಳಿದುಬಂದಿದೆ.




