
(ನ್ಯೂಸ್ ಕಡಬ) newskadaba.com, ಸೆ .15 . ಡಿಜಿಟಲ್ ಪಾವತಿ ಬಳಕೆದಾರರಿಗೆ ಕೇಂದ್ರ ಸರ್ಕಾರ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂ. ವರೆಗೆ ನಡೆಯುವ ಯುಪಿಐ ವಹಿವಾಟುಗಳಿಗೆ ಯಾವುದೇ ನೇರ ಅಥವಾ ಪರೋಕ್ಷ ಶುಲ್ಕ ವಿಧಿಸುವಂತಿಲ್ಲ ಎಂದು ತಿಳಿಸಿದೆ. ಇದೇ ನಿಯಮ ರೂಪೇ ಡೆಬಿಟ್ ಕಾರ್ಡ್ ಮೂಲಕ ನಡೆಯುವ ಪಾವತಿಗಳಿಗೂ ಅನ್ವಯವಾಗಲಿದೆ.
ಬ್ಯಾಂಕ್ಗಳು ಅಥವಾ ಪಾವತಿ ವ್ಯವಸ್ಥೆ ಒದಗಿಸುವ ಸಂಸ್ಥೆಗಳು ಇಂತಹ ವಹಿವಾಟುಗಳಿಗೆ ಗ್ರಾಹಕರಿಂದ ಯಾವುದೇ ಶುಲ್ಕ ವಸೂಲಿ ಮಾಡುವಂತಿಲ್ಲ. ಕೇಂದ್ರ ಹಣಕಾಸು ಸಚಿವಾಲಯವು ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ 2007ರ ತಿದ್ದುಪಡಿ ನಿಯಮಗಳ ಅಡಿಯಲ್ಲಿ ಈ ಅಧಿಸೂಚನೆ ಹೊರಡಿಸಿದೆ. 2,000 ರೂ.ವರೆಗೆ ಯುಪಿಐ ಮೂಲಕ ಹಣ ಪಾವತಿಸುವವರು ಮಾತ್ರವಲ್ಲದೆ, ಹಣ ಸ್ವೀಕರಿಸುವವರ ಮೇಲೂ ಯಾವುದೇ ನೇರ ಅಥವಾ ಪರೋಕ್ಷ ಶುಲ್ಕ ವಿಧಿಸಲು ಅವಕಾಶವಿಲ್ಲ. ರೂಪೇ ಡೆಬಿಟ್ ಕಾರ್ಡ್ ಪಾವತಿಗಳಿಗೂ ಇದೇ ರೀತಿಯ ಶುಲ್ಕ ವಿನಾಯಿತಿ ಮುಂದುವರಿಯಲಿದೆ.

ಸದ್ಯದ ಅಧಿಸೂಚನೆಯ ಪ್ರಮುಖ ಅಂಶವೆಂದರೆ, 2,000 ರೂ.ಗಿಂತ ಹೆಚ್ಚಿನ ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸುವ ಸಾಧ್ಯತೆಗೆ ಅವಕಾಶ ಕಲ್ಪಿಸಿರುವುದು. ಆದರೆ ಇಂತಹ ವಹಿವಾಟುಗಳಿಗೆ ಶುಲ್ಕ ವಿಧಿಸುವುದೇ ಅಥವಾ ಇಲ್ಲವೇ, ವಿಧಿಸಿದರೆ ಎಷ್ಟು ಶುಲ್ಕ ಮತ್ತು ಯಾವ ರೀತಿಯಲ್ಲಿ ವಿಧಿಸಲಾಗುತ್ತದೆ ಎಂಬುದರ ಕುರಿತು ಸರ್ಕಾರದಿಂದ ಇನ್ನೂ ಅಂತಿಮ ನಿರ್ಧಾರ ಹೊರಬಿದ್ದಿಲ್ಲ.




