(ನ್ಯೂಸ್ ಕಡಬ) newskadaba.com, ಸೆ. 12. ನಕಲಿ ಔಷಧಗಳ ತಯಾರಿ ಹಾಗೂ ಮಾರಾಟ ಜಾಲದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು, ವರ್ಷಾನುಗಟ್ಟಲೇ ನಕಲಿ ಔಷಧ ಸರಬರಾಜು ಮಾಡಿದ್ದ ಸರಬರಾಜು ಕಂಪನಿಗಳ ಮೇಲೆ ಶುಕ್ರವಾರ(ಸೆ.11ರಂದು) ದಾಳಿ ನಡೆಸಿದ್ದಾರೆ. ಈ ಜಾಲದ ಪ್ರಧಾನ ಕಿಂಗ್‌ಪಿನ್ ಎನ್ನಲಾದ ವೀರೇಶ್ ಎಂಬುವನನ್ನು ವಶಕ್ಕೆ ಪಡೆದಿದೆ.

ಮಿನರ್ವ ಸರ್ಕಲ್‌ನಲ್ಲಿರುವ ವೀರೇಶ್ ಮಾಲೀಕತ್ವದ ಕೃಪಾ ಫಾರ್ಮ ಹಾಗೂ ತೆಲಂಗಾಣ, ಹಿಮಾಚಲಪ್ರದೇಶ, ಹರಿಯಾಣ, ಮಹಾರಾಷ್ಟ್ರ, ತಮಿಳುನಾಡಿನಲ್ಲಿರುವ ವಿವಿಧ ಔಷಧ ಸರಬರಾಜು ಕಂಪನಿಗಳ ಮೇಲೆ ದಾಳಿ ನಡೆಸಲಾಗಿದೆ. ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಕೃತ್ಯಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಜತೆಗೆ, ನಕಲಿ ಔಷಧ ಹಾಗೂ ಲೇಬಲ್ ಕೂಡ ಪತ್ತೆಯಾಗಿದೆ.
ಹೊರ ರಾಜ್ಯಗಳಲ್ಲಿ ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ. ದಾಳಿ ಪೂರ್ಣಗೊಂಡ ಬಳಿಕ ಈ ಸರಬರಾಜು ಕಂಪನಿಗಳು ಎಷ್ಟು ವರ್ಷಗಳಿಂದ ನಕಲಿ ಔಷಧ ಸರಬರಾಜು ಮಾಡುತ್ತಿದ್ದವು, ಈ ಕಂಪನಿಗಳ ವಹಿವಾಟು ಹಾಗೂ ಇತರೆ ನಿಯಮ ಉಲ್ಲಂಘನೆಗಳ ಬಗ್ಗೆ ಖಚಿತತೆ ಸಿಗಲಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

”ದಾಳಿಗೆ ಒಳಗಾದ ಕೃಪಾ ಫಾರ್ಮ್ ಸೇರಿದಂತೆ ಇತರ ಕಂಪನಿಗಳು ಬೆಂಗಳೂರು ದಕ್ಷಿಣ ಜಿಲ್ಲೆಯ ಸಿ.ಕೆ. ತಾಂಡಾದ ಫಾರ್ಮ್‌ಹೌಸ್‌ನಲ್ಲಿ ತಯಾರಾಗುತ್ತಿದ್ದ ನಕಲಿ ಔಷಧಗಳನ್ನು ಹಲವು ವರ್ಷಗಳಿಂದ ಖರೀದಿ ಮಾಡುತ್ತಿದ್ದವು. ಇದೇ ಔಷಧಿಗಳಿಗೆ ನಕಲಿ ಲೇಬಲ್ ಅಂಟಿಸಿ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಪೂರೈಕೆ ಮಾಡುತ್ತಿದ್ದರು. ಈ ಜಾಲದಲ್ಲಿ ಸಕ್ರಿಯವಾಗಿರುವ ಬಗ್ಗೆ ಪೂರಕ ದಾಖಲೆಗಳನ್ನು ಸಂಗ್ರಹಿಸಿ ದಾಳಿ ನಡೆಸಲಾಗಿದೆ,” ಎಂದು ತನಿಖಾ ಮೂಲಗಳು ಹೇಳಿವೆ.





