ಉಡುಪಿ ಶಾಸಕ ಯಶ್‌ಪಾಲ್ ಸುವರ್ಣರ ವಿರುದ್ಧ ಕಡಬ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ದೂರು



(ನ್ಯೂಸ್ ಕಡಬ) newskadaba.com ಕಡಬ, ಆ. 02. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಕಡಬ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಯತೀಶ್ ಕುಮಾರ್ ಗೌಡ ಬಾನಡ್ಕ ಅವರು ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ.







 

ಜುಲೈ 28ರಂದು ಉಡುಪಿ ನಗರ ಬಸ್ ನಿಲ್ದಾಣ ಸಮೀಪದ ಜಟ್ಕಾ ಸ್ಟ್ಯಾಂಡ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ‘ಡ್ರಗ್ ಎಡಿಕ್ಟ್’ ಎಂದು ಸುಳ್ಳು ಪ್ರಚಾರ ಮಾಡಿ ಜನರಲ್ಲಿ ತಪ್ಪು ಭಾವನೆ, ಅಪನಂಬಿಕೆ, ಅಗೌರವ ಉಂಟು ಮಾಡುವಂತೆ ಮಾತನಾಡಿದ್ದಾರೆ. ಅಲ್ಲದೇ ಬಾಬರಿ ಮಸೀದಿ ಧ್ವಂಸ ಮಾಡಿ ಸಂಭ್ರಮಿಸಿದ್ದೇವೆ. ಈಗ ನಾವು ರಾಹುಲ್ ಗಾಂಧಿ ವಂಶವನ್ನು ಬಾಬರಿ ಧ್ವಂಸಗೈದ ರೀತಿಯಲ್ಲೇ ಧ್ವಂಸ ಮಾಡುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು ಪ್ರಚೋದಿಸಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಗಲಭೆ ಮಾಡುವಂತೆ ಹುನ್ನಾರ ನಡೆಸಿ ಅಭದ್ರತೆ, ಗಲಭೆಗೆ ಪ್ರಚೋದನೆ ಮಾಡಿ ಗುಂಪು ಗಲಭೆಯನ್ನು ಉಂಟು ಮಾಡುವ ಪ್ರಯತ್ನವನ್ನು ಮಾಡಿದ್ದಾರೆ.






ಸಮಾಜದಲ್ಲಿ ಧರ್ಮ, ಧರ್ಮಗಳ ನಡುವೆ ಅಶಾಂತಿಯನ್ನುಂಟು ಮಾಡುವ ರೀತಿಯಲ್ಲಿ ಸಾರ್ವಜನಿಕರನ್ನು ಪ್ರಚೋದಿಸಿರುತ್ತಾರೆ. ನೀಟ್ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಒಡ್ಡಿ, ವಿವಿಧ ಗುಂಪುಗಳ ನಡುವೆ ದ್ವೇಷವನ್ನುಂಟು ಮಾಡಿ ಸೌಹಾರ್ಧತೆಗೆ ಧಕ್ಕೆಯಾಗುವಂತಹ ಕೃತ್ಯ ಎಸಗಿದ್ದಾರೆ. ಆದ್ದರಿಂದ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಕಡಬ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹಾಜಿ ಹನೀಫ್ ಕೆಎಂ., ಕಡಬ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತೀಶ್ ನ್ಯಾಕ್ ಭೂಮಿಕಾ, ಉಪಾಧ್ಯಕ್ಷ ಕ್ಸೇವಿಯರ್ ಬೇಬಿ, ರಾಮಕುಂಜ ಗ್ರಾಮ ಸಮಿತಿ ಅಧ್ಯಕ್ಷ ಕರುಣಾಕರ ಗೌಡ ರಾಮಕುಂಜ, ಕಡಬ ಬ್ಲಾಕ್ ಪ್ರಚಾರ ಸಮಿತಿ ಖಜಾಂಜಿ ಮುರಳಿ ಮೂರಾಜೆ, ಸಂಯೋಜಕ ಗುರುರಾಜ್ ಕುಂತೂರು, ರಾಯ್ ಟಿ.ಎಂ. ಇಚ್ಲಂಪಾಡಿ, ಜಿಲ್ಲಾ ಪ್ರಚಾರ ಸಮಿತಿ ಸದಸ್ಯ ಜಯರಾಮ ಗೌಡ ಎಡಮಂಗಲ ಮತ್ತಿತರರು ಉಪಸ್ಥಿತರಿದ್ದರು.

error: Content is protected !!
Scroll to Top