ಆಧುನಿಕ ಆಹಾರ ಪದ್ಧತಿಯಿಂದ ಗ್ರಾಮೀಣ ಅಡುಗೆ ಮನೆಗಳ ಬದಲಾಗುತ್ತಿರುವ ಚಿತ್ರ ಸೌಲಭ್ಯ ಹೆಚ್ಚಾಯಿತು ಆದರೆ ಆರೋಗ್ಯವನ್ನು ನಾವು ಕಳೆದುಕೊಳ್ಳುತ್ತಿದ್ದೇವೆಯೇ? ಡಾ. ಅಜಿತ್ ಕೆ. ಕೋಡಿಂಬಾಳ



(ನ್ಯೂಸ್ ಕಡಬ) newskadaba.com ಜು. 30. ಒಂದು ಕಾಲದಲ್ಲಿ ಗ್ರಾಮೀಣ ಮನೆಯ ಅಡುಗೆ ಮನೆ ಎಂದರೆ ಆರೋಗ್ಯದ ಭಂಡಾರವಾಗಿತ್ತು. ಮನೆಯಲ್ಲೇ ರುಬ್ಬಿದ ಮಸಾಲೆ, ಕಡಿಮೆ ಪಾಲಿಶ್ ಮಾಡಿದ ಅಕ್ಕಿ, ಋತುಮಾನಕ್ಕೆ ತಕ್ಕ ತರಕಾರಿಗಳು, ಸೊಪ್ಪುಗಳು, ಬೇಳೆಕಾಳುಗಳು, ಮೊಸರು, ಮಜ್ಜಿಗೆ, ಮನೆಯಲ್ಲೇ ತಯಾರಿಸಿದ ಉಪ್ಪಿನಕಾಯಿ, ಕಬ್ಬಿಣದ ಪಾತ್ರೆ, ಮಣ್ಣಿನ ಮಡಿಕೆ – ಇವೆಲ್ಲವೂ ನಮ್ಮಆಹಾರ ಸಂಸ್ಕೃತಿಯ ಭಾಗವಾಗಿದ್ದವು. ಇಂತಹ ಆಹಾರ ಪದ್ಧತಿಗಳು ಕೇವಲ ಹೊಟ್ಟೆ ತುಂಬಿಸುವುದಲ್ಲ, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತಿದ್ದವು.







 

ಆದರೆ ಇಂದು ಗ್ರಾಮೀಣ ಪ್ರದೇಶಗಳಲ್ಲಿಯೂ ಅಡುಗೆ ಮನೆಯ ಚಿತ್ರ ನಿಧಾನವಾಗಿ ಬದಲಾಗುತ್ತಿದೆ. ಇದು ನಗರೀಕರಣದ ಪರಿಣಾಮ ಮಾತ್ರವಲ್ಲ; ಸಮಯದ ಅಭಾವ, ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುವ ಸಂಸ್ಕರಿತ ಆಹಾರಗಳು, ಜಾಹೀರಾತುಗಳ ಪ್ರಭಾವ, ಅನುಕೂಲಕರ ಜೀವನಶೈಲಿ ಮತ್ತು ಬದಲಾಗುತ್ತಿರುವ ಆಹಾರ ಅಭ್ಯಾಸಗಳು ಈ ಬದಲಾವಣೆಗೆ ಪ್ರಮುಖ ಕಾರಣಗಳಾಗಿವೆ.






ಈ ಬದಲಾವಣೆಗಳನ್ನು ನಾವು ಸಣ್ಣ ವಿಷಯಗಳೆಂದು ನಿರ್ಲಕ್ಷಿಸಿದರೆ, ಮುಂದಿನ ದಿನಗಳಲ್ಲಿ ಮಧುಮೇಹ, ರಕ್ತದೊತ್ತಡ, ಬೊಜ್ಜು, ಕೊಬ್ಬಿನ ಯಕೃತ್ (Fatty Liver), ಜೀರ್ಣಕ್ರಿಯೆಯ ತೊಂದರೆಗಳು ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಮತ್ತಷ್ಟು ಹೆಚ್ಚಾಗಬಹುದು.

೧. ಮನೆಯ ಮಸಾಲೆಯ ಬದಲು ಪ್ಯಾಕೆಟ್ ಮಸಾಲೆ

ಇಂದು ಅನೇಕ ಮನೆಗಳಲ್ಲಿ ಸಾಂಬಾರ ಪುಡಿ, ಮೀನು ಫ್ರೈ ಮಸಾಲೆ, ಚಿಕನ್ ಮಸಾಲೆ, ಕಬಾಬ್ ಮಸಾಲೆ, ಬಿರಿಯಾನಿ ಮಸಾಲೆ – ಎಲ್ಲವೂ ಪ್ಯಾಕೆಟ್‌ ನಿಂದಲೇ ಬರುತ್ತಿವೆ.

ಎಲ್ಲಾ ಪ್ಯಾಕೆಟ್ ಮಸಾಲೆಗಳು ಹಾನಿಕಾರಕವೆಂದು ಹೇಳುವುದು ಸರಿಯಲ್ಲ. ಆದರೆ ಕೆಲವು ಉತ್ಪನ್ನಗಳಲ್ಲಿ ಹೆಚ್ಚು ಉಪ್ಪು, ಕೃತಕಬಣ್ಣ, ರುಚಿವರ್ಧಕಗಳು, ಸಂರಕ್ಷಕಗಳು ಹಾಗೂ ಹೆಚ್ಚು ಸೋಡಿಯಂ ಇರಬಹುದು. ದಿನನಿತ್ಯ ಇವುಗಳ ಮೇಲೆ ಸಂಪೂರ್ಣ ಅವಲಂಬಿತರಾದರೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಹಿಂದೆ ಮನೆಯಲ್ಲೇ ಧನಿಯಾ, ಜೀರಿಗೆ, ಮೆಣಸು, ಅರಿಶಿನ, ಮೆಣಸಿನಕಾಯಿ, ಕರಿಬೇವು, ಮೆಂತ್ಯೆ ಇತ್ಯಾದಿಗಳನ್ನು ಹುರಿದು ರುಬ್ಬಲಾಗುತ್ತಿತ್ತು. ಇವು ರುಚಿಯ ಜೊತೆಗೆ ಪೋಷಕಾಂಶ ಹಾಗೂ ನೈಸರ್ಗಿಕ ಸುವಾಸನೆಯನ್ನು ನೀಡುತ್ತಿದ್ದವು.

೨. “ಬೇಗ ಬೇಯಬೇಕು” ಎನ್ನುವ ಕಾರಣಕ್ಕೆ ಹೆಚ್ಚು ಪಾಲಿಶ ಮಾಡಿದ ಅಕ್ಕಿ

ಇಂದು ಅಕ್ಕಿ ಆಯ್ಕೆ ಮಾಡುವಾಗ ಬಹುತೇಕ ಜನರು ಕೇಳುವ ಪ್ರಶ್ನೆ – “ಬೇಗ ಬೇಯುತ್ತದೆಯೇ?”

ಈ ಒಂದು ಪ್ರಶ್ನೆಯೇ ನಮ್ಮ ಆಹಾರದ ಗುಣಮಟ್ಟವನ್ನು ಬದಲಾಯಿಸಿದೆ.

ಅಕ್ಕಿಯನ್ನು ಹೆಚ್ಚು ಪಾಲಿಶ್ ಮಾಡಿದಂತೆ ಅದರ ಮೇಲ್ಭಾಗದಲ್ಲಿರುವ ನಾರಿನಾಂಶ, ಬಿ-ವಿಟಮಿನ್‌ಗಳು ಹಾಗೂ ಕೆಲವು ಖನಿಜಾಂಶಗಳು ಕಡಿಮೆಯಾಗುತ್ತವೆ. ಪರಿಣಾಮವಾಗಿ ಹೊಟ್ಟೆ ಬೇಗ ತುಂಬಿದರೂ ದೇಹಕ್ಕೆ ಸಿಗುವ ಪೋಷಕಾಂಶ ಕಡಿಮೆಯಾಗುತ್ತದೆ.

ಕಡಿಮೆ ಪಾಲಿಶ್ ಮಾಡಿದ ಅಕ್ಕಿ, ಕೆಂಪು ಅಕ್ಕಿ ಅಥವಾ ವಾರದಲ್ಲಿ ಕೆಲವು ದಿನ ಸಿರಿಧಾನ್ಯಗಳನ್ನು ಬಳಸುವುದು ಆರೋಗ್ಯಕರ ಆಯ್ಕೆಯಾಗಿದೆ.

೩. ತರಕಾರಿಗಳ ಜಾಗದಲ್ಲಿ ಮಾಂಸಾಹಾರ

ಹಿಂದೆ ಮಾಂಸಾಹಾರವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಇತ್ತು. ಇಂದು ಅನೇಕ ಮನೆಗಳಲ್ಲಿ ವಾರದಲ್ಲಿ ನಾಲ್ಕೈದು ದಿನ ಮಾಂಸಾಹಾರ ಸಾಮಾನ್ಯವಾಗಿದೆ.

ಮಾಂಸಾಹಾರ ಪ್ರೋಟೀನ್‌ನ ಉತ್ತಮ ಮೂಲ. ಆದರೆ ಪ್ರತಿದಿನ ಹೆಚ್ಚು ಎಣ್ಣೆಯಲ್ಲಿ ಕರಿದ ಅಥವಾ ಮಸಾಲೆ ಹೆಚ್ಚಿರುವ ಮಾಂಸಾಹಾರ ಸೇವಿಸಿ, ತರಕಾರಿಗಳು ಹಾಗೂ ಬೇಳೆಗಳನ್ನು ಕಡೆಗಣಿಸುವುದು ಸಮತೋಲನ ಆಹಾರವಲ್ಲ. ಒಂದು ಆರೋಗ್ಯಕರ ತಟ್ಟೆಯಲ್ಲಿ ಅರ್ಧಭಾಗ ತರಕಾರಿ, ಕಾಲು ಭಾಗ ಧಾನ್ಯ ಹಾಗೂ ಉಳಿದ ಕಾಲು ಭಾಗ ಪ್ರೋಟೀನ್ ಇರಬೇಕು.

೪. ಒಂದೇ ರೀತಿಯ ಆಹಾರ – ಪೋಷಕಾಂಶದ ಕೊರತೆಗೆ ಆಹ್ವಾನ

“ಪ್ರತಿದಿನ ಅನ್ನ, ಸಾರು, ಮೀನು” ಅಥವಾ “ಅನ್ನ, ಚಿಕನ್” – ಇದೇ ಆಹಾರ ಪದ್ಧತಿ ಅನೇಕ ಮನೆಗಳಲ್ಲಿ ಕಂಡುಬರುತ್ತಿದೆ.

ಮಾನವ ದೇಹಕ್ಕೆ 40 ಕ್ಕೂ ಹೆಚ್ಚು ಅಗತ್ಯ ಪೋಷಕಾಂಶಗಳು ಬೇಕಾಗುತ್ತವೆ. ಒಂದೇ ರೀತಿಯ ಆಹಾರದಿಂದ ಅವೆಲ್ಲವೂ ದೊರೆಯುವುದಿಲ್ಲ.

ಪ್ರತಿದಿನ ಬೇರೆ ಬೇರೆ ತರಕಾರಿ, ಸೊಪ್ಪು, ಬೇಳೆ, ಹಣ್ಣು ಹಾಗೂ ಧಾನ್ಯಗಳನ್ನು ಸೇರಿಸುವುದೇ ನಿಜವಾದ ಸಮತೋಲನ ಆಹಾರ.

೫. ಬೆಳಗ್ಗೆಖಾಲಿ ಹೊಟ್ಟೆಯಲ್ಲಿ ಸಿಹಿ ಚಹಾ

ಬಹುತೇಕ ಜನರು ಬೆಳಗ್ಗೆ ನೀರು ಕುಡಿಯುವ ಮೊದಲು ಚಹಾ ಕುಡಿಯುತ್ತಾರೆ.

ಖಾಲಿ ಹೊಟ್ಟೆಯಲ್ಲಿ ಗಟ್ಟಿ ಚಹಾ ಕುಡಿಯುವುದರಿಂದ ಕೆಲವರಲ್ಲಿ ಅಸಿಡಿಟಿ, ಹೊಟ್ಟೆ ಉರಿ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗಳು ಹೆಚ್ಚಾಗಬಹುದು. ಜೊತೆಗೆ ಹೆಚ್ಚು ಸಕ್ಕರೆ ಸೇರಿಸಿದರೆ ದೇಹಕ್ಕೆ ಅನಗತ್ಯ ಕ್ಯಾಲೊರಿಗಳು ಸೇರುತ್ತವೆ.

ಮೊದಲು ಒಂದು ಲೋಟ ನೀರು ಕುಡಿಯುವುದು, ನಂತರ ಹಣ್ಣು ಅಥವಾ ಲಘು ಉಪಹಾರ ಸೇವಿಸಿ ಚಹಾ ಕುಡಿಯುವುದು ಉತ್ತಮ ಅಭ್ಯಾಸ.

೬. ಅಡುಗೆ ಪಾತ್ರೆಗಳಲ್ಲಿಯೂ ಬದಲಾವಣೆ

ಹಿಂದೆ ಕಬ್ಬಿಣದ ಪಾತ್ರೆ, ಮಣ್ಣಿನ ಮಡಿಕೆ, ಪಿತ್ತಳ ಹಾಗೂ ಸ್ಟೇನ್ ಲೆಸ್ ಸ್ಟೀಲ್ ಪಾತ್ರೆಗಳ ಬಳಕೆ ಸಾಮಾನ್ಯವಾಗಿತ್ತು.

ಇಂದು ನಾನ್- ಸ್ಟಿಕ್ ಪಾತ್ರೆಗಳು ಹಾಗೂ ಅಲ್ಯೂಮಿನಿಯಂ ಪಾತ್ರೆಗಳ ಬಳಕೆ ಹೆಚ್ಚಾಗಿದೆ.

ನಾನ್-ಸ್ಟಿಕ್ ಪಾತ್ರೆಗಳನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಸಾಮಾನ್ಯವಾಗಿ ಸುರಕ್ಷಿತ. ಆದರೆ ಗೀರು ಬಿದ್ದ ಅಥವಾ ಹಾಳಾದ ನಾನ್-ಸ್ಟಿಕ್ ಪಾತ್ರೆಗಳನ್ನು ಬಳಸಬಾರದು.

ಅದೇ ರೀತಿ, ಹಳೆಯ ಅಥವಾ ಹಾನಿಗೊಂಡ ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಹೆಚ್ಚು ಹುಳಿ ಆಹಾರವನ್ನು ಪದೇ ಪದೇ ಬೇಯಿಸುವುದನ್ನು ತಪ್ಪಿಸುವುದು ಉತ್ತಮ.

೭. ಎಣ್ಣೆಯ ಮರು ಬಳಕೆ – ಮೌನದ ಅಪಾಯ

ಹಲವು ಮನೆಗಳಲ್ಲಿ ಮೀನು ಅಥವಾ ಚಿಕನ್ ಕರಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸುವ ಅಭ್ಯಾಸವಿದೆ.

ಒಂದೇ ಎಣ್ಣೆಯನ್ನು ಮರು ಮರು ಬಿಸಿ ಮಾಡಿದರೆ ಅದರ ಗುಣಮಟ್ಟ ಕುಸಿಯಬಹುದು ಮತ್ತು ಆರೋಗ್ಯಕ್ಕೆ ಹಾನಿಕಾರಕ ಸಂಯುಕ್ತಗಳು ರೂಪುಗೊಳ್ಳುವ ಸಾಧ್ಯತೆ ಇದೆ.

೮. ಪ್ಯಾಕೆಟ್ಆಹಾರಗಳತ್ತಮಕ್ಕಳಒಲವು

ಬಿಸ್ಕಟ್, ಚಿಪ್ಸ್, ವೇಫರ್, ಕಲರ್ ಕ್ಯಾಡಿ, ಸಾಫ್ಟ್ ಡ್ರಿಂಕ್ಸ್ – ಇವು ಮಕ್ಕಳ ದಿನ ನಿತ್ಯದ ಆಹಾರವಾಗುತ್ತಿವೆ.

ಇವುಗಳ ಬದಲು ಕಡಲೆ, ಶೇಂಗಾ, ಹಣ್ಣು, ಮೊಳಕೆ ಕಾಳು, ರಾಗಿ ಉಂಡೆ, ಅವಲಕ್ಕಿ, ಮನೆಯಲ್ಲೇ ತಯಾರಿಸಿದ ಆರೋಗ್ಯಕರ ತಿಂಡಿಗಳನ್ನು ನೀಡುವುದು ಉತ್ತಮ.

೯. ನಮ್ಮ ತಟ್ಟೆಯಿಂದ ಕಾಣೆಯಾಗುತ್ತಿರುವ ಸಿರಿಧಾನ್ಯಗಳು

ರಾಗಿ, ನವಣೆ, ಸಜ್ಜೆ, ಜೋಳ, ಸಾಮೆ – ಇವು ಒಂದು ಕಾಲದಲ್ಲಿ ಗ್ರಾಮೀಣ ಜೀವನದ ಭಾಗವಾಗಿದ್ದವು.

ಇಂದು ಅವುಗಳ ಸ್ಥಾನವನ್ನು ಕೇವಲ ಬಿಳಿ ಅಕ್ಕಿ ಪಡೆದುಕೊಂಡಿದೆ.

ಸಿರಿಧಾನ್ಯಗಳು ನಾರಿನಾಂಶ, ಖನಿಜಾಂಶ ಹಾಗೂ ನಿಧಾನವಾಗಿ ಜೀರ್ಣವಾಗುವ ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲವಾಗಿವೆ.

೧೦. ಜಾಹೀರಾತುಗಳು ಆಹಾರವನ್ನು ನಿರ್ಧರಿಸುತ್ತಿವೆಯೇ?

ಇಂದು ಯಾವ ಆಹಾರ ಆರೋಗ್ಯಕರ ಎಂಬುದನ್ನು ಅಜ್ಜ-ಅಜ್ಜಿಯರು ಹೇಳುವುದಕ್ಕಿಂತ ಜಾಹೀರಾತುಗಳು ಹೇಳುತ್ತಿರುವ ಪರಿಸ್ಥಿತಿ ಬಂದಿದೆ.

“ಇನ್‌ ಸ್ಟಂಟ್”, “ರೆಡಿ ಟು ಕುಕ್”, “ಎರಡು ನಿಮಿಷ”, “ಹೋಟೆಲ್ ರುಚಿ” ಎಂಬ ಪದಗಳು ಗ್ರಾಹಕರನ್ನು ಆಕರ್ಷಿಸುತ್ತವೆ. ಆದರೆ ಆಹಾರವನ್ನು ಆಯ್ಕೆ ಮಾಡುವಾಗ ಅದರ ಪೋಷಕಾಂಶ, ಉಪ್ಪು, ಸಕ್ಕರೆ ಹಾಗೂ ಕೊಬ್ಬಿನ ಪ್ರಮಾಣವನ್ನು ಗಮನಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು.

ಪೂರ್ವಜರ ಆಹಾರ ಪದ್ಧತಿಯಲ್ಲಿ ಅಡಗಿದ್ದ ವಿಜ್ಞಾನ

ನಮ್ಮ ಹಿರಿಯರು “ಸಮತೋಲನ ಆಹಾರ” ಎಂಬ ಪದವನ್ನು ಬಳಸಿರಲಿಲ್ಲ. ಆದರೆ ಅವರ ಆಹಾರ ಪದ್ಧತಿಯಲ್ಲಿ ಅದರ ತತ್ವ ಅಡಗಿತ್ತು.

  • ಋತುಮಾನಕ್ಕೆ ತಕ್ಕ ಆಹಾರ.
  • ಮನೆಯಲ್ಲೇ ತಯಾರಿಸಿದ ಮಸಾಲೆ.
  • ವಿವಿಧ ಸೊಪ್ಪು ಹಾಗೂ ತರಕಾರಿಗಳ ಬಳಕೆ.
  • ವಾರಕ್ಕೊಮ್ಮೆ ಸಿರಿಧಾನ್ಯ.
  • ಪ್ರತಿದಿನ ಬೇಳೆ ಅಥವಾ ಕಾಳು.
  • ಕಡಿಮೆ ಸಂಸ್ಕರಿಸಿದ ಧಾನ್ಯ.
  • ಮಜ್ಜಿಗೆ ಮತ್ತು ಮೊಸರು.
  • ಮನೆಯಲ್ಲೇ ತಯಾರಿಸಿದ ತಿಂಡಿಗಳು.
  • ಆಹಾರ ವ್ಯರ್ಥ ಮಾಡದ ಸಂಸ್ಕೃತಿ.
  • ದೈಹಿಕ ಶ್ರಮದ ಜೀವನ.

ಇವೆಲ್ಲವೂ ಆರೋಗ್ಯಕರ ಜೀವನಶೈಲಿಯ ಆಧಾರಸ್ತಂಭಗಳಾಗಿದ್ದವು.

ನಾವು ಏನು ಮಾಡಬೇಕು?

  • ವಾರದಲ್ಲಿ ಕನಿಷ್ಠ ಮೂರು ದಿನ ಮನೆಯಲ್ಲೇ ತಯಾರಿಸಿದ ಮಸಾಲೆ ಬಳಸಿರಿ.
  • ಹೆಚ್ಚು ಪಾಲಿಶ್ ಮಾಡಿದ ಅಕ್ಕಿಯ ಬದಲು ಕಡಿಮೆ ಪಾಲಿಶ೵ ಮಾಡಿದ ಅಕ್ಕಿ ಅಥವಾ ಸಿರಿಧಾನ್ಯಗಳನ್ನು ಸೇರಿಸಿ.
  • ಪ್ರತಿಯೊಂದು ಊಟದಲ್ಲೂ ಅರ್ಧ ತಟ್ಟೆ ತರಕಾರಿ ಇರಲಿ.
  • ವಾರದಲ್ಲಿ ಕೆಲವು ದಿನ ಸಸ್ಯಾಹಾರಿ ಪ್ರೋಟೀನ್‌ ಗಳಿಗೆ ಆದ್ಯತೆ ನೀಡಿ.
  • ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದನ್ನು ತಪ್ಪಿಸಿ.
  • ಸಕ್ಕರೆಯ ಪ್ರಮಾಣವನ್ನು ನಿಧಾನವಾಗಿ ಕಡಿಮೆ ಮಾಡಿ.
  • ಗೀರು ಬಿದ್ದ ನಾನ್-ಸ್ಟಿಕ್ ಪಾತ್ರೆಗಳನ್ನು ಬದಲಾಯಿಸಿ.
  • ಎಣ್ಣೆಯನ್ನು ಮರು ಮರು ಬಿಸಿ ಮಾಡಬೇಡಿ.
  • ಮಕ್ಕಳಿಗೆ ಪ್ಯಾಕೆಟಟ್ ತಿಂಡಿಗಳ ಬದಲು ಮನೆಯ ಆರೋಗ್ಯಕರ ತಿಂಡಿಗಳನ್ನು ನೀಡಿ.
  • ಪ್ರತಿದಿನ ಒಂದೇ ರೀತಿಯ ಆಹಾರವಲ್ಲ, ವೈವಿಧ್ಯಮಯ ಆಹಾರವನ್ನು ಸೇವಿಸಿ.

ಆಧುನಿಕತೆಯನ್ನು ವಿರೋಧಿಸುವ ಅಗತ್ಯವಿಲ್ಲ. ಹೊಸ ತಂತ್ರಜ್ಞಾನ, ಹೊಸ ಅಡುಗೆ ವಿಧಾನಗಳು ಮತ್ತು ಅನುಕೂಲಕರ ಆಹಾರಗಳು ನಮ್ಮ ಜೀವನವನ್ನು ಸುಲಭಗೊಳಿಸಿವೆ. ಆದರೆ ಸೌಲಭ್ಯಕ್ಕಾಗಿ ಆರೋಗ್ಯವನ್ನು ಬಲಿಕೊಡಬಾರದು.

ಗ್ರಾಮೀಣ ಅಡುಗೆ ಮನೆಗಳ ನಿಜವಾದ ಶಕ್ತಿ ಪ್ಯಾಕೆಟ್‌ಗಳಲ್ಲಿ ಇರಲಿಲ್ಲ; ಅದು ಮನೆಯ ಮಸಾಲೆಯ ಸುವಾಸನೆಯಲ್ಲಿ, ತಾಜಾ ತರಕಾರಿಗಳ ಬಣ್ಣದಲ್ಲಿ, ಸಿರಿಧಾನ್ಯಗಳ ಪೌಷ್ಟಿಕತೆಯಲ್ಲಿ, ತಾಯಿಯ ಕೈಯಿಂದ ತಯಾರಾದ ಆಹಾರದಲ್ಲಿ ಮತ್ತು ಸಮತೋಲನದ ಊಟದಲ್ಲಿ ಅಡಗಿತ್ತು.

ನಾವು ಮರೆಯುತ್ತಿರುವುದು ಕೇವಲ ಒಂದು ಆಹಾರ ಪದ್ಧತಿಯಲ್ಲ; ಆರೋಗ್ಯಕರ ಜೀವನಶೈಲಿಯ ಪರಂಪರೆಯನ್ನೇ. ಆ ಪರಂಪರೆಯನ್ನು ಉಳಿಸುವುದು ನಮ್ಮ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

ಡಾ.ಅಜಿತ್ ಕೊಡಿಂಬಾಳ

error: Content is protected !!
Scroll to Top