ಅಮೃತ ಭಾರತ ನಿಲ್ದಾಣ ಯೋಜನೆ ಬಂಟ್ವಾಳ ರೈಲ್ವೇ ನಿಲ್ದಾಣದ ಮರು ಅಭಿವೃದ್ಧಿ ಉದ್ಘಾಟನೆ



(ನ್ಯೂಸ್ ಕಡಬ) newskadaba.com ಜು. 18. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಂಜಾಬ್‌ನ ಜಲಂಧರ್ ಕ್ಯಾಂಟ್ ರೈಲ್ವೆ ನಿಲ್ದಾಣದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಬಂಟ್ವಾಳ ಸೇರಿದಂತೆ ರಾಷ್ಟ್ರದ 75 ರೈಲ್ವೇ ನಿಲ್ದಾಣಗಳ ಮರು ಅಭಿವೃದ್ಧಿ ಕಾಮಗಾರಿಯನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮವನ್ನು ಬಂಟ್ವಾಳ ರೈಲ್ವೇ ನಿಲ್ದಾಣದ ಬೃಹತ್ ಎಲ್.ಇ.ಡಿ ಪರದೆಯ ಮೂಲಕ ನೇರ ಪ್ರಸಾರ ಮಾಡಲಾಯಿತು.







​ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬಂಟ್ವಾಳ ರೈಲ್ವೇ ನಿಲ್ದಾಣದಲ್ಲಿ 26.18 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು. ​ಕೊಂಕಣ ರೈಲ್ವೆ ವಿಭಾಗವನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಅವಶ್ಯಕತೆಯನ್ನು ಸಂಸದರು ಪ್ರತಿಪಾದಿಸಿದರು.
​ಪುತ್ತೂರು ರೈಲ್ವೆ ನಿಲ್ದಾಣವನ್ನು ಕೂಡ ‘ಅಮೃತ ಭಾರತ’ ಯೋಜನೆಯಡಿ ಸೇರ್ಪಡೆಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.






ಮಂಗಳೂರಿಗೆ ವಂದೇ ಭಾರತ ರೈಲು ಸಂಚಾರಕ್ಕೆ ಪೂರಕವಾದ ರೈಲ್ವೆ ಹಳಿಗಳ ವಿದ್ಯುದೀಕರಣವನ್ನು ಶೀಘ್ರದಲ್ಲಿ ಪೂರ್ಣಗೊಳಿಸಿದ ನೈಋತ್ಯ ರೈಲ್ವೆಯ ಕಾರ್ಯಕ್ಷಮತೆಯನ್ನು ಸಂಸದರು ಶ್ಲಾಘಿಸಿದರು. ಅಲ್ಲದೆ, ಕೇವಲ 25 ರೂಪಾಯಿಯ ಪ್ರಯಾಣ ದರದಲ್ಲಿ ಮಂಗಳೂರಿನಿಂದ ಸುಬ್ರಹ್ಮಣ್ಯ ರೋಡ್‌ಗೆ ಸಂಚರಿಸುವ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

​ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ರೈಲ್ವೆ ಅಧಿಕಾರಿಗಳು, ಪದ್ಮಶ್ರೀ ಪುರಸ್ಕೃತರಾದ ಹರೇಕಳ ಹಾಜಬ್ಬ ಮತ್ತು ಮಹಾಲಿಂಗ ನಾಯ್ಕ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಂಟ್ವಾಳದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮತ್ತು ರೈಲ್ವೆ ಸಿಬ್ಬಂದಿಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

error: Content is protected !!
Scroll to Top