(ನ್ಯೂಸ್ ಕಡಬ) newskadaba.com, ಜು.18 ಮಂಜೇಶ್ವರ: ಇಲ್ಲಿನ ಉದ್ಯಾವರ ಮಾಡ ಶ್ರೀ ಅರಸು ಕೃಪಾ ವೀರ ಮಾರುತಿ ವ್ಯಾಯಾಮ ಶಾಲೆಯ ಮುಖ್ಯ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು, ಕಾಣಿಕೆ ಡಬ್ಬಿಯಲ್ಲಿದ್ದ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಈ ಘಟನೆ ಶನಿವಾರ ಮುಂಜಾನೆ ಬೆಳಕಿಗೆ ಬಂದಿದೆ.ವ್ಯಾಯಾಮ ಶಾಲೆಯಲ್ಲಿ ನಡೆಯಲಿದ್ದ ಪೂಜೆಯ ಸಿದ್ಧತೆಗಳಿಗಾಗಿ ಶನಿವಾರ ಮುಂಜಾನೆ 5 ಗಂಟೆಗೆ ಪದಾಧಿಕಾರಿಯೊಬ್ಬರು ಆಗಮಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಕಳ್ಳರು ಕಬ್ಬಿಣದ ರಾಡ್ ಬಳಸಿ ಮುಖ್ಯ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿದ್ದಾರೆ. ದೇವರ ಮುಂಭಾಗದಲ್ಲಿದ್ದ ಕಾಣಿಕೆ ಡಬ್ಬಿಯನ್ನು ಒಡೆದು ನಗದು ದೋಚಿದ ಬಳಿಕ, ಖಾಲಿ ಡಬ್ಬಿಯನ್ನು ಶಾಲೆಯ ಮುಂಭಾಗದ ಪೊದೆಯಲ್ಲಿ ಎಸೆದು ಪರಾರಿಯಾಗಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ವ್ಯಾಯಾಮ ಶಾಲೆಯ ಅಧ್ಯಕ್ಷ ಸದಾನಂದ ಅವರು ಮಂಜೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.









