ವಂದೇ ಮಾತರಂ ಗೀತೆಗೆ ಕಾನೂನು ರಕ್ಷಣೆ: ಕೇಂದ್ರದಿಂದ ಹೊಸ ಮಸೂದೆ ಸಿದ್ಧತೆ



(ನ್ಯೂಸ್‌ ಕಡಬ) newskadaba.com,  ಜು.18  ನವದೆಹಲಿ: ದೇಶಭಕ್ತಿಯ ಸಂಕೇತವಾಗಿರುವ ‘ವಂದೇ ಮಾತರಂ’ ಗೀತೆಗೆ ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜದ ಮಾದರಿಯಲ್ಲೇ ಸಮಾನ ಕಾನೂನು ಸ್ಥಾನಮಾನ ಹಾಗೂ ರಕ್ಷಣೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂಬರುವ ಸಂಸತ್ ಅಧಿವೇಶನದಲ್ಲಿ ಈ ಸಂಬಂಧಿತ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಸಿದ್ಧತೆ ನಡೆಸಲಾಗಿದೆ.







‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಗಟ್ಟುವಿಕೆ ಕಾಯ್ದೆ-1971’ಕ್ಕೆ ತಿದ್ದುಪಡಿ ತರಲಾಗುತ್ತಿದ್ದು, ವಂದೇ ಮಾತರಂ ಗೀತೆಗೆ ಅವಮಾನ ಮಾಡಿದರೆ ಅಥವಾ ಹಾಡುವಾಗ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.






1875ರಲ್ಲಿ ಬಂಕಿಮಚಂದ್ರ ಚಟ್ಟೋಪಾಧ್ಯಾಯರು ರಚಿಸಿದ ಈ ಗೀತೆಯ ಸಂಪೂರ್ಣ ಆವೃತ್ತಿಯ ಗಾಯನ ಕುರಿತು ದಶಕಗಳ ಭಿನ್ನಾಭಿಪ್ರಾಯವಿದೆ. 1937ರಲ್ಲಿ ಧಾರ್ಮಿಕ ಭಾವನೆಗಳ ಆಕ್ಷೇಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಇದರ ಮೊದಲ ಎರಡು ಚರಣಗಳನ್ನಷ್ಟೇ ಬಳಸಲು ನಿರ್ಧರಿಸಿತ್ತು. ಇದನ್ನು ಬಿಜೆಪಿ ‘ತುಷ್ಟೀಕರಣ ರಾಜಕಾರಣ’ ಎಂದು ಕರೆಯುತ್ತಾ ತೀವ್ರವಾಗಿ ಟೀಕಿಸುತ್ತಾ ಬಂದಿದೆ.

ವಂದೇ ಮಾತರಂ ರಚನೆಯಾಗಿ 150ನೇ ವರ್ಷದ ಆಚರಣೆಯ ಹೊಸ್ತಿಲಲ್ಲಿರುವಾಗ ಈ ಮಸೂದೆ ಮುನ್ನೆಲೆಗೆ ಬಂದಿದೆ. ಸರ್ಕಾರ ಇದನ್ನು ರಾಷ್ಟ್ರೀಯ ಗೀತೆಗೆ ನೀಡುತ್ತಿರುವ ಅಧಿಕೃತ ಮಾನ್ಯತೆ ಎನ್ನುತ್ತಿದ್ದರೆ, ವಿರೋಧ ಪಕ್ಷಗಳು ಇದನ್ನು ರಾಜಕೀಯ ಲಾಭದ ಅಸ್ತ್ರ ಎಂದು ವಿರೋಧಿಸುವ ಸಾಧ್ಯತೆಯಿದ್ದು, ಸಂಸತ್ತಿನಲ್ಲಿ ಭಾರೀ ಚರ್ಚೆ ಏರ್ಪಡುವ ನಿರೀಕ್ಷೆಯಿದೆ.

 

error: Content is protected !!
Scroll to Top