(ನ್ಯೂಸ್ ಕಡಬ) newskadaba.com ಜು. 15. ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಡಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತಂಡವು ಜುಲೈ 15ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದೆ.
ಎಸ್‌ಐಟಿ ಅಧಿಕಾರಿಗಳು ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ಮುಂದೆ ಇಂದು ಮಧ್ಯಾಹ್ನ 3 ಗಂಟೆಗೆ ವರದಿಯನ್ನು ಸಲ್ಲಿಕೆ ಮಾಡಿದರು. 7,000ಕ್ಕೂ ಅಧಿಕ ಪುಟಗಳಿರುವ ಈ ವರದಿಯು ಒಟ್ಟು 12 ಪ್ರತ್ಯೇಕ ಕಡತಗಳನ್ನು ಒಳಗೊಂಡಿದೆ.
ತನಿಖೆಯ ವೇಳೆ ದಾಖಲಾದ 255 ಸಾಕ್ಷಿಗಳ ಹೇಳಿಕೆಗಳು, ವಿಧಿ ವಿಜ್ಞಾನ ಪ್ರಯೋಗಾಲಯದ (FSL) ವರದಿಗಳು ಮತ್ತು ಇತರೆ ಪ್ರಮುಖ ದಾಖಲೆಗಳನ್ನು ಲಗತ್ತಿಸಲಾಗಿದೆ. ಸಾಕ್ಷಿಗಳ ವಿಡಿಯೊ ಹೇಳಿಕೆಗಳನ್ನು ಒಳಗೊಂಡ 4 ಟೆರಾಬೈಟ್ (4TB) ಸಾಮರ್ಥ್ಯದ ಹಾರ್ಡ್ ಡಿಸ್ಕ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಎಫ್‌ಎಸ್‌ಎಲ್ ಪರೀಕ್ಷೆಗೆ ಒಳಪಡಿಸಲಾಗಿದ್ದ ಬುರುಡೆ, ಅಸ್ಥಿಪಂಜರ, ಮೊಬೈಲ್ ಫೋನ್ ಸೇರಿದಂತೆ ವಶಪಡಿಸಿಕೊಂಡಿದ್ದ ಎಲ್ಲಾ ವಸ್ತುಗಳನ್ನು ನ್ಯಾಯಾಲಯದ ವಶಕ್ಕೆ ಹಸ್ತಾಂತರಿಸಲಾಗಿದೆ.
ವರದಿ ಸಲ್ಲಿಕೆಯ ವೇಳೆ ಪ್ರಕರಣದ ಪ್ರಮುಖ ವ್ಯಕ್ತಿ ಚಿನ್ನಯ್ಯ ಅವರು ತಮ್ಮ ಪತ್ನಿಯೊಂದಿಗೆ ನ್ಯಾಯಾಲಯದಲ್ಲಿ ಹಾಜರಿದ್ದರು.









