(ನ್ಯೂಸ್ ಕಡಬ) newskadaba.com ಜು. 15. ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ಒಮಾನ್ ಕರಾವಳಿ ಸಮೀಪ ಸಂಚರಿಸುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ಜುಲೈ 12ರ ಮಧ್ಯರಾತ್ರಿ ಭೀಕರ ಕ್ಷಿಪಣಿ ದಾಳಿ ನಡೆದಿದ್ದು, ಈ ದಾಳಿಯಿಂದ ರಕ್ಷಿಸಲ್ಪಟ್ಟ ಭಾರತೀಯ ಸಿಬ್ಬಂದಿಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ರಚನ್ ಆರ್.ಕೆ. (25) ಕೂಡ ಒಬ್ಬರಾಗಿದ್ದಾರೆ.
ಭಾನುವಾರ ಮುಂಜಾನೆ ಸುಮಾರು 2.05 ಗಂಟೆಗೆ ಕ್ಷಿಪಣಿ ಅಪ್ಪಳಿಸಿದ ಪರಿಣಾಮ ಹಡಗಿನ ಎಂಜಿನ್ ಕೊಠಡಿಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣವೇ ಎಚ್ಚೆತ್ತ ಸಿಬ್ಬಂದಿ ಜೀವ ರಕ್ಷಕ ದೋಣಿಗಳ ಮೂಲಕ ಸಮುದ್ರಕ್ಕೆ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಗೊಂದಲದ ನಡುವೆ ಪುಣೆ ಮೂಲದ ಓರ್ವ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಒಮಾನ್ ನೌಕಾಪಡೆ, ರಚನ್ ಸೇರಿದಂತೆ 10 ಭಾರತೀಯ ಸಿಬ್ಬಂದಿಯನ್ನು ರಕ್ಷಿಸಿದೆ.
ಪ್ರಸ್ತುತ ರಚನ್ ಅವರು ಒಮಾನ್ನಲ್ಲಿ ತಮ್ಮ ಶಿಪ್ಪಿಂಗ್ ಕಂಪನಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸುರಕ್ಷಿತವಾಗಿದ್ದು, ತಾವು ದುಬೈಗೆ ತೆರಳುತ್ತಿರುವುದಾಗಿ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಮಗ ಸುರಕ್ಷಿತವಾಗಿರುವ ಸುದ್ದಿ ತಿಳಿದು ನಿರಾಳರಾಗಿರುವ ರಚನ್ ಅವರ ತಂದೆ ರೋಹಿತಾಕ್ಷ ಬಾಣಬೆಟ್ಟು, ಸಿಬ್ಬಂದಿಯನ್ನು ರಕ್ಷಿಸಿದ ಒಮಾನ್ ನೌಕಾಪಡೆಗೆ ಕೃತಜ್ಞತೆ ಸಲ್ಲಿಸಿದ್ದು, ನಾಪತ್ತೆಯಾದ ಸಿಬ್ಬಂದಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.










