ಆನ್ ಲೈನ್ ಹಣ ಹೂಡಿಕೆ ಹೆಸರಲ್ಲಿ ವಂಚನೆ ವೃದ್ಧನಿಗೆ 10.15 ಲಕ್ಷ ರೂ. ನಾಮ!



(ನ್ಯೂಸ್ ಕಡಬ) newskadaba.com ಜು. 12. ವಾಟ್ಸ್ಆ್ಯಪ್ ಮೂಲಕ ಬಂದ ಸಂದೇಶವನ್ನು ನಂಬಿ ಆನ್ಲೈನ್ನಲ್ಲಿ ಹಣ ಹೂಡಿಕೆ ಮಾಡಿದ 68 ವರ್ಷದ ವೃದ್ಧರೊಬ್ಬರು ಬರೋಬ್ಬರಿ 10,15,000 ರೂ. ಕಳೆದುಕೊಂಡು ವಂಚನೆಗೊಳಗಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಸಂಬಂಧ ಮಂಗಳೂರು ಸೆನ್ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







ದೂರುದಾರ ವೃದ್ಧರಿಗೆ ಜೂನ್ 25 ರಂದು ವಾಟ್ಸ್ಆ್ಯಪ್ ಮೂಲಕ ಸಂದೇಶವೊಂದು ಬಂದಿದ್ದು, ಅದನ್ನು ನಂಬಿದ ಅವರು, ಅಪರಿಚಿತ ವ್ಯಕ್ತಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಜೂನ್ 25 ರಿಂದ ಜುಲೈ 9 ಅವಧಿಯಲ್ಲಿ ಒಟ್ಟು 10,15,000 ರೂ. ಹಣವನ್ನು ವರ್ಗಾಯಿಸಿದ್ದರು.






ವಂಚಕರು ನೀಡಿದ್ದ ಆ್ಯಪ್ನಲ್ಲಿ ವೃದ್ಧರು ಹೂಡಿಕೆ ಮಾಡಿದ ಹಣವು ಬಡ್ಡಿ ಸೇರಿ ಒಟ್ಟು 34,10,149 ರೂ. ಜಮಾವಣೆ ಆಗಿರುವಂತೆ ತೋರಿಸುತ್ತಿತ್ತು. ಆದರೆ, ಹಣವನ್ನು ಹಿಂಪಡೆಯಲು ಮುಂದಾದಾಗ, ಅಪರಿಚಿತ ವ್ಯಕ್ತಿಗಳು ಹಣ ನೀಡದೆ ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದಾರೆ.

ಇದೇ ವೇಳೆ ಅನುಮಾನಗೊಂಡ ವೃದ್ಧ ವಿಷಯವನ್ನು ತಮ್ಮ ಮಗಳ ಬಳಿ ತಿಳಿಸಿದ್ದಾರೆ. ಪರಿಶೀಲಿಸಿದಾಗ ತಾವು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಅಪರಿಚಿತ ವ್ಯಕ್ತಿಗಳು ತಮಗೆ ಆಮಿಷ ಒಡ್ಡಿ 10.15 ಲಕ್ಷ ರೂ. ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡು ವಂಚನೆ ಎಸಗಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತ ವೃದ್ದ ದೂರಿನಲ್ಲಿ ವಿನಂತಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

error: Content is protected !!
Scroll to Top