(ನ್ಯೂಸ್ ಕಡಬ) newskadaba.com, ಜು.10 : ಕರ್ನಾಟಕದಲ್ಲೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯು ಮಂಗಳೂರಿನ ಸಮೀಪದ ಕೆಮ್ರಾಲ್‌ನಲ್ಲಿ ಮರುಬಳಕೆ ಮಾಡಲು ಸಾಧ್ಯವಾಗದ ಒಣ ತ್ಯಾಜ್ಯವನ್ನು ಇಂಧನ ಪೆಲ್ಲೆಟ್‌ಗಳಾಗಿ ಪರಿವರ್ತಿಸುವ ಘಟಕವನ್ನು ಸ್ಥಾಪಿಸಿದೆ.
ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಸುಮಾರು ₹50 ಲಕ್ಷ ವೆಚ್ಚದಲ್ಲಿ ಪುಲ್ವರೈಸರ್ ಮತ್ತು ಪೆಲ್ಲೆಟೈಸರ್ ಯಂತ್ರೋಪಕರಣಗಳನ್ನು ಅಳವಡಿಸಿ ಈ ಘಟಕ ಸಿದ್ಧಪಡಿಸಲಾಗಿದೆ.ಈ ಹಿಂದೆ ಕಸವನ್ನು ಬೆಳಗಾವಿ, ಕಲಬುರಗಿಯ ಸಿಮೆಂಟ್ ಕಾರ್ಖಾನೆಗಳಿಗೆ ಸಾಗಿಸಲು ಪ್ರತಿ ಲಾರಿಗೆ ₹48,000 ವೆಚ್ಚವಾಗುತ್ತಿತ್ತು. ಈಗ ಈ ಸಾಗಣೆ ವೆಚ್ಚ ಸಂಪೂರ್ಣ ಉಳಿತಾಯವಾಗಲಿದೆ.
ಪುಣೆ ಮೂಲದ ಕಂಪನಿಯು ಪ್ರತಿ ಕೆ.ಜಿಗೆ ₹5 ದರದಲ್ಲಿ ಈ ಪೆಲ್ಲೆಟ್‌ಗಳನ್ನು ಮರುಖರೀದಿ ಮಾಡಲು ಒಪ್ಪಂದ ಮಾಡಿಕೊಂಡಿದೆ.ಪ್ರಾಯೋಗಿಕ ಹಂತದಲ್ಲಿರುವ ಈ ಘಟಕವು ದಿನಕ್ಕೆ 2 ಟನ್ ತ್ಯಾಜ್ಯ ಸಂಸ್ಕರಿಸುವ ಸಾಮರ್ಥ್ಯ ಹೊಂದಿದ್ದು, ತಿಂಗಳಿಗೆ 50 ಟನ್ ಪೆಲ್ಲೆಟ್ ಉತ್ಪಾದಿಸುವ ಗುರಿ ಹೊಂದಿದೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯ ‘ಕೊರ್ದಬ್ಬು ಸಂಜೀವಿನಿ ಒಕ್ಕೂಟ’ ಇದನ್ನು ನಿರ್ವಹಿಸುತ್ತಿದ್ದು, ಐವರಿಗೆ ಉದ್ಯೋಗ ನೀಡಿದೆ.









