(ನ್ಯೂಸ್ ಕಡಬ) newskadaba.com, ಜು.08 : ಯುನೈಟೆಡ್ ಅರಬ್ ಎಮಿರೇಟ್ಸ್ನ (ಯುಎಇ) ಶಾರ್ಜಾದಿಂದ ಪಾಕಿಸ್ತಾನದ ಕರಾಚಿಗೆ ಹೊರಟಿದ್ದ ಸರಕು ಸಾಗಣೆ (ಕಾರ್ಗೋ) ವಿಮಾನವೊಂದು ಮಂಗಳವಾರ ರಾತ್ರಿ ಅರಬ್ಬಿ ಸಮುದ್ರದ ಮೇಲೆ ಹಾರಾಟ ನಡೆಸುತ್ತಿದ್ದಾಗ ದಿಢೀರ್ ನಾಪತ್ತೆಯಾಗಿದೆ. ವಿಮಾನದಲ್ಲಿ ಐವರು ಸಿಬ್ಬಂದಿ ಇದ್ದರು.
ಮಾರ್ಗಮಧ್ಯೆ ವಿಮಾನದ ನ್ಯಾವಿಗೇಷನ್ ಸಿಸ್ಟಮ್ನಲ್ಲಿ ದೋಷ ಕಾಣಿಸಿಕೊಂಡಿದ್ದರ ಬಗ್ಗೆ ಪೈಲಟ್ ಕರಾಚಿ ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ (ATC) ಮಾಹಿತಿ ನೀಡಿದ್ದರು.ರಾತ್ರಿ 9:18ಕ್ಕೆ ಕೊನೆಯ ಸಂಪರ್ಕ ಸಿಕ್ಕಿದ್ದು, ಅದಾದ ಕೇವಲ 4 ನಿಮಿಷಗಳಲ್ಲಿ (ರಾತ್ರಿ 9:22) ವಿಮಾನವು ದಿಕ್ಕು ಬದಲಾಯಿಸಿ ವೇಗವಾಗಿ ಕೆಳಮುಖವಾಗಿ ಇಳಿದಿರುವುದು ರಾಡಾರ್ನಲ್ಲಿ ದಾಖಲಾಗಿದೆ.
ಕರಾಚಿಯಿಂದ ಪಶ್ಚಿಮಕ್ಕೆ ಸುಮಾರು 155 ನಾಟಿಕಲ್ ಮೈಲಿ ದೂರದಲ್ಲಿ ಸಂಪರ್ಕ ಕಡಿತಗೊಂಡಿದ್ದು, ವಿಮಾನವು ಸಮುದ್ರಕ್ಕೆ ಅಪ್ಪಳಿಸಿರುವ ಶಂಕೆ ವ್ಯಕ್ತವಾಗಿದೆ.ನಾಪತ್ತೆಯಾಗಿರುವ ಸಿಬ್ಬಂದಿ ಹಾಗೂ ವಿಮಾನದ ಪತ್ತೆಗಾಗಿ ವಿವಿಧ ಸಂಸ್ಥೆಗಳು ಜಂಟಿಯಾಗಿ ಭಾರಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಅಪಘಾತಕ್ಕೆ ನಿಖರ ಕಾರಣ ಇನ್ನು ತಿಳಿದುಬರಬೇಕಿದೆ.









