(ನ್ಯೂಸ್ ಕಡಬ) newskadaba.com ಕಡಬ, ಜು. 02. ರಸ್ತೆಯಂಚಿನಲ್ಲಿದ್ದ ಅಕೇಶಿಯ ಜಾತಿಯ ಮರವೊಂದು ಬುಡ ಸಮೇತ ಧರಶಾಯಿಯಾಗಿದ್ದು ರಸ್ತೆಯಲ್ಲಿ ಸಂಚರಿಸುತ್ತಿದ್ದ ಸ್ಕೂಟಿ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾದ ಘಟನೆ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗೋಳಿತ್ತಡಿ ಎಂಬಲ್ಲಿ ಬುಧವಾರದಂದು ಸಂಜೆ ನಡೆದಿದೆ.
ಗಾಯಗೊಂಡವರನ್ನು ಆತೂರು ಪೇಟೆಯಲ್ಲಿರುವ ಡಿಲೈಟ್ ಹಾರ್ಡ್ ವೇರ್ ಅಂಗಡಿ ಮಾಲಕ ಇಕ್ಬಾಲ್ ಎಂದು ಗುರುತಿಸಲಾಗಿದೆ. ಇವರು ತನ್ನ ಮನೆ ಕುಂಡಾಜೆಯಿಂದ ಅಂಗಡಿಯತ್ತ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಏಕಾಏಕಿ ಮರ ಬಿದ್ದಿದೆ. ಘಟನೆಯಿಂದ ಸ್ಕೂಟಿಗೆ ಹಾನಿಯಾಗಿದ್ದು, ಗಾಯಗೊಂಡ ಅವರನ್ನು ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮರ ಬಿಳುತ್ತಿದ್ದಂತೆ ಕಾರೊಂದು ತೆರಳಿದ್ದು ಕೆಲವೇ ಸೆಕುಂಡುಗಳಲ್ಲಿ ಭಾರಿ ಅಪಾಯ ತಪ್ಪಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಕೆಲ ಕಾಲ ಸಂಚಾರ ವ್ಯತ್ಯಯ ಉಂಟಾಯಿತು. ಸ್ಥಳೀಯರ ಸಹಕಾರದಿಂದ ಮರ ತೆರವುಗೊಳಿಸಲಾಯಿತು.









