ಉಳ್ಳಾಲ: ಭಾರಿ ಮಳೆಗೆ ಖಾಸಗಿ ಎಸ್ಟೇಟ್ ಕಾಂಪೌಂಡ್ ಗೋಡೆ ಕುಸಿದು ಮನೆ ನೆಲಸಮ; ಪ್ರಾಣಹಾನಿ ಮುಂಜಾಗ್ರತೆಯಿಂದ ಮುಕ್ತಿ

(ನ್ಯೂಸ್‌ ಕಡಬ) newskadaba.com,   ಜು.01 ಮಂಗಳೂರು: ಉಳ್ಳಾಲದ ತೊಕ್ಕೊಟ್ಟು ಬಳಿಯ ಕೆರೆಬೈಲ್‌ನಲ್ಲಿ ಖಾಸಗಿ ಎಸ್ಟೇಟ್‌ವೊಂದರ ಬೃಹತ್ ಕಾಂಪೌಂಡ್ ಗೋಡೆ ಕುಸಿದು ಬಿದ್ದ ಪರಿಣಾಮ, ಪಕ್ಕದ ಕಿಶೋರ್ ಎಂಬುವವರ ಮನೆ ಸಂಪೂರ್ಣವಾಗಿ ನೆಲಸಮವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಕಳೆದ ವರ್ಷ ಸುರಿದ ಭಾರಿ ಮಳೆಗೆ ಈ ಗೋಡೆ ಕಿಶೋರ್ ಅವರ ಮನೆಯತ್ತ ವಾಲಿತ್ತು.

ಅಪಾಯವನ್ನು ಅರಿತ ಉಳ್ಳಾಲ ನಗರ ಪುರಸಭೆ ಅಧಿಕಾರಿಗಳು, ಎರಡು ವಾರಗಳ ಹಿಂದಷ್ಟೇ ಕಿಶೋರ್ ಅವರ ಕುಟುಂಬ ಸೇರಿದಂತೆ ಸುತ್ತಮುತ್ತಲಿನ 10 ಮನೆಗಳ ನಿವಾಸಿಗಳನ್ನು ಬಾಡಿಗೆ ಮನೆಗಳಿಗೆ ಸ್ಥಳಾಂತರಿಸಿದ್ದರು.ಮಂಗಳವಾರ ರಾತ್ರಿಯಿಡೀ ಸುರಿದ ನಿರಂತರ ಮಳೆಗೆ ದುರ್ಬಲಗೊಂಡಿದ್ದ ಕಾಂಪೌಂಡ್ ಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.

ಕುಟುಂಬಸ್ಥರು ಮೊದಲೇ ಸ್ಥಳಾಂತರಗೊಂಡಿದ್ದರಿಂದ ಪವಾಡಸದೃಶವಾಗಿ ದೊಡ್ಡ ದುರಂತವೊಂದು ತಪ್ಪಿದೆ.ಈ ಎಸ್ಟೇಟ್ ಡೆಲ್ಟಾ ಇನ್ಫ್ರಾಲಾಜಿಸ್ಟಿಕ್ಸ್ ವರ್ಲ್ಡ್‌ವೈಡ್ ಲಿಮಿಟೆಡ್‌ನ ಮಾಲೀಕ ಅಹ್ಮದ್ ಮೊಯ್ದೀನ್ ಅವರಿಗೆ ಸೇರಿದ್ದಾಗಿದೆ. ಗೋಡೆ ಅಪಾಯಕಾರಿ ಸ್ಥಿತಿಯಲ್ಲಿದ್ದರೂ ಸೂಕ್ತ ಕ್ರಮ ಕೈಗೊಳ್ಳದ ಉಳ್ಳಾಲ ನಗರ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Scroll to Top