(ನ್ಯೂಸ್ ಕಡಬ) newskadaba.com, : ಭಾರತೀಯ ನಾಗರಿಕ ವಿಮಾನಯಾನ ರಂಗದಲ್ಲಿ ಇತಿಹಾಸ ಸೃಷ್ಟಿಯಾಗಿದೆ. ನೆಲದ ಮೇಲಿನ ಸಾಂಪ್ರದಾಯಿಕ ರೇಡಿಯೋ ಕಿರಣಗಳ ಸಹಾಯವಿಲ್ಲದೆ, ಸಂಪೂರ್ಣವಾಗಿ ಸ್ವದೇಶಿ ಉಪಗ್ರಹ ಆಧಾರಿತ ‘ಗಗನ್’ತಂತ್ರಜ್ಞಾನವನ್ನು ಬಳಸಿ ಇಂಡಿಗೊ ಸಂಸ್ಥೆಯ ಬೃಹತ್ ಏರ್‌ಬಸ್ ಎ320 ವಿಮಾನವು ಉದಯಪುರದಲ್ಲಿ ಯಶಸ್ವಿಯಾಗಿ ಇಳಿದಿದೆ. ಈ ಸಾಧನೆ ಮಾಡಿದ ದೇಶದ ಮೊದಲ ವಾಣಿಜ್ಯ ಪ್ಯಾಸೆಂಜರ್ ಜೆಟ್ ವಿಮಾನ ಇದಾಗಿದೆ.
ಇದನ್ನು ಇಸ್ರೋ (ISRO) ಮತ್ತು ಎಎಐ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಇದು ಸ್ವತಂತ್ರ ನ್ಯಾವಿಗೇಷನ್ ವ್ಯವಸ್ಥೆಯಲ್ಲ. ಬದಲಿಗೆ, ಜಿಪಿಎಸ್ ಸಿಗ್ನಲ್‌ಗಳ ದೋಷಗಳನ್ನು ಸರಿಪಡಿಸುವ ‘ಬುದ್ಧಿವಂತ ಸಹಾಯಕ’ ವ್ಯವಸ್ಥೆಯಾಗಿದೆ.ಭಾರತದಾದ್ಯಂತ ಇರುವ 15 ಗ್ರೌಂಡ್ ಸ್ಟೇಷನ್‌ಗಳು ಜಿಪಿಎಸ್ ದೋಷಗಳನ್ನು ಲೆಕ್ಕಹಾಕಿ, ಇಸ್ರೋದ GSAT-8 ಮತ್ತು GSAT-10 ಉಪಗ್ರಹಗಳ ಮೂಲಕ ನಿಖರ ಸಿಗ್ನಲ್ ಅನ್ನು ನೇರವಾಗಿ ವಿಮಾನಕ್ಕೆ ರವಾನಿಸುತ್ತವೆ.
ಪ್ರಾದೇಶಿಕ ವಿಮಾನ ನಿಲ್ದಾಣಗಳಲ್ಲಿ ದುಬಾರಿ ರನ್‌ವೇ ಉಪಕರಣಗಳಿಲ್ಲದೆಯೂ ಸುರಕ್ಷಿತ ಲ್ಯಾಂಡಿಂಗ್ ಸಾಧ್ಯ.ಕಳಪೆ ಹವಾಮಾನ ಅಥವಾ ದಟ್ಟ ಮಂಜಿನಲ್ಲೂ ವಿಮಾನಗಳು ಮಾರ್ಗ ಬದಲಿಸುವುದನ್ನು ತಪ್ಪಿಸಿ, ಕಾರ್ಯಾಚರಣೆಯ ವೆಚ್ಚವನ್ನು ತಗ್ಗಿಸುತ್ತದೆ.ಅತ್ಯಂತ ಕಠಿಣವಾದ ಸಮಭಾಜಕ ವೃತ್ತದ ಆಕಾಶದಲ್ಲಿ ಈ ಅತ್ಯಾಧುನಿಕ ತಂತ್ರಜ್ಞಾನವನ್ನು ಯಶಸ್ವಿಯಾಗಿ ಸಾಬೀತುಪಡಿಸಿದ ವಿಶ್ವದ ಏಕೈಕ ದೇಶ ಭಾರತ.







