(ನ್ಯೂಸ್ ಕಡಬ) newskadaba.com, ಜೂ.25 ಜನರ ದುಃಖ ಮತ್ತು ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಖದೀಮರು, ಬೆಂಗಳೂರಿನಲ್ಲಿ ಶವ ಸಂಸ್ಕಾರದ ಸ್ಲಾಟ್ ಬುಕ್ಕಿಂಗ್ ಹೆಸರಿನಲ್ಲಿ ಭಾರಿ ವಂಚನೆ ಎಸಗುತ್ತಿರುವುದು ಬೆಳಕಿಗೆ ಬಂದಿದೆ. ರಾಜಧಾನಿಯ ವಿದ್ಯುತ್ ಚಿತಾಗಾರಗಳಲ್ಲಿ ಅಂತ್ಯಸಂಸ್ಕಾರಕ್ಕಾಗಿ ಮುಂಗಡ ಸ್ಲಾಟ್ ಕಾಯ್ದಿರಿಸುವ ಅಧಿಕೃತ ವ್ಯವಸ್ಥೆಯನ್ನು ಹೋಲುವ ನಕಲಿ ವೆಬ್ಸೈಟ್ಗಳನ್ನು ಸೃಷ್ಟಿಸಿ ಈ ದೋಖಾ ಮಾಡಲಾಗುತ್ತಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಚಿತಾಗಾರಗಳಲ್ಲಿ ಶವ ಸಂಸ್ಕಾರಕ್ಕೆ ಅಧಿಕೃತವಾಗಿ ಕೇವಲ ರೂ. 250 ಶುಲ್ಕ ನಿಗದಿಪಡಿಸಲಾಗಿದೆ. ಆದರೆ ವಂಚಕರು ನಕಲಿ ಸೈಟ್ಗಳ ಮೂಲಕ ಸಾರ್ವಜನಿಕರಿಂದ ಸಾವಿರಾರು ರೂಪಾಯಿ ಲೂಟಿ ಮಾಡುತ್ತಿದ್ದಾರೆ.ಈ ಜಾಲದ ಕುರಿತು ಬೆಂಗಳೂರಿನ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.
ಸಾರ್ವಜನಿಕರು ಶವ ಸಂಸ್ಕಾರ ಸೇರಿದಂತೆ ಯಾವುದೇ ನಾಗರಿಕ ಸೇವೆಗಳಿಗೆ ಹಣ ಪಾವತಿಸುವ ಮುನ್ನ ಅಧಿಕೃತ ವೆಬ್ಸೈಟ್ ಮತ್ತು ಮೂಲಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.ದುಃಖದ ಸಂದರ್ಭದಲ್ಲಿರುವ ಕುಟುಂಬಗಳ ತುರ್ತು ಅಗತ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಈ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.









