(ನ್ಯೂಸ್ ಕಡಬ) newskadaba.com, ಜೂ.25 ಬೆಂಗಳೂರು: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಹೊರತಂದಿರುವ 6ನೇ ತರಗತಿಯ ಕನ್ನಡ ಪಠ್ಯಪುಸ್ತಕಕ್ಕೆ ಮಾಜಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದೊಂದಿಗೆ ಯಾವುದೇ ಪೂರ್ವ ಚರ್ಚೆ ನಡೆಸದೆ ಈ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
‘ಕೃಷ್ಣ’ ಎಂದು ಹೆಸರಿಡಲಾದ ಈ ಪಠ್ಯಪುಸ್ತಕದಲ್ಲಿ ಕನ್ನಡದ ವೈಚಾರಿಕ ಪರಂಪರೆ, ಪ್ರಾದೇಶಿಕ ಜೀವನಶೈಲಿ ಹಾಗೂ ಕರಾವಳಿ, ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆ ಮೈಸೂರು ಭಾಗದ ಜಾನಪದ ಹಾಗೂ ಸಾಹಿತ್ಯವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ.
ಸಮತೋಲಿತ ಆಹಾರದ ಪಾಠದಲ್ಲಿ ಮೊಟ್ಟೆ, ಮೀನು ಮತ್ತು ಮಾಂಸಾಹಾರದ ಕುರಿತು ಯಾವುದೇ ಉಲ್ಲೇಖವಿಲ್ಲದೆ, ಕೇವಲ ಸಸ್ಯಾಹಾರಕ್ಕೆ ಮಾತ್ರ ಆದ್ಯತೆ ನೀಡಲಾಗಿದೆ. ಇದು ಏಕಪಕ್ಷೀಯ ನಿರೂಪಣೆಯಾಗಿದೆ.ಪಠ್ಯಪುಸ್ತಕ ರಚನಾ ಸಮಿತಿಯಲ್ಲಿ ಕೆಲವು ಖಾಸಗಿ ಶಾಲೆ ಮತ್ತು ಕಾಲೇಜುಗಳ ಪ್ರತಿನಿಧಿಗಳನ್ನು ಸೇರಿಸಿರುವುದಕ್ಕೂ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
“ನಾನು ರಕ್ತದಲ್ಲಿ ಹಿಂದೂ, ಕೃಷ್ಣನ ಬಗ್ಗೆ ನನಗೆ ಯಾವುದೇ ವಿರೋಧವಿಲ್ಲ. ಆದರೆ ಧರ್ಮ ಮತ್ತು ಶಿಕ್ಷಣವನ್ನು ಬೆರೆಸಿ ಮಕ್ಕಳ ದಾರಿ ತಪ್ಪಿಸಬಾರದು. ಶಿಕ್ಷಣದಲ್ಲಿ ಸಮಾನತೆ ಇರಬೇಕು” ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.ರಾಜ್ಯದ DSERT ಈಗಾಗಲೇ ‘ಸವಿ ಕನ್ನಡ’, ‘ಸಿರಿ ಕನ್ನಡ’ ಮತ್ತು ‘ತಿಳಿ ಕನ್ನಡ’ ಪುಸ್ತಕಗಳನ್ನು ಸಿದ್ಧಪಡಿಸಿದ್ದು, ಅವುಗಳನ್ನು ಬದಿಗೊತ್ತಿ ಹೊಸ ಪುಸ್ತಕ ತಂದಿರುವುದು ಕನ್ನಡದ ಅಸ್ಮಿತೆಗೆ ಧಕ್ಕೆ ತಂದಿದೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹಾಗೂ ಅಗತ್ಯವಿದ್ದರೆ ಹೋರಾಟ ರೂಪಿಸುವುದಾಗಿ ಅವರು ಎಚ್ಚರಿಸಿದ್ದಾರೆ.









