(ನ್ಯೂಸ್ ಕಡಬ) newskadaba.com ಜೂ. 10. ನಗರದಲ್ಲಿ ಸಂಚರಿಸುತ್ತಿರುವ ಮೀನಿನ ಲಾರಿಗಳಿಂದ ನೀರು ಸೋರಿಕೆಯಾಗಿ ದುರ್ವಾಸನೆ ಮತ್ತು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ನಿರಂತರ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮೀನಿನ ಕಾರ್ಖಾನೆ ಹಾಗೂ ಉದ್ಯಮಿಗಳ ಸಭೆಯನ್ನು ಪೊಲೀಸ್ ಇಲಾಖೆ ನಡೆಸಲಾಗಿದೆ.
ಪ್ರಸ್ತುತ ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ಮೀನಿನ ಲಾರಿಗಳ ನೀರುಗಳನ್ನು ವಿಸರ್ಜಿಸಲು ಸೆಪ್ಟಿಕ್ ಟ್ಯಾಂಕ್‍ಗಳನ್ನು ನಿರ್ಮಿಸಲಾಗಿದೆ. ಇದೇ ರೀತಿ ಜಿಲ್ಲೆಯ ತಲಪಾಡಿ ಮತ್ತು ಮುಲ್ಕಿಯಲ್ಲಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಿದರೆ ತ್ಯಾಜ್ಯ ನೀರನ್ನು ಅಲ್ಲಿ ವಿಸರ್ಜಿಸಿ ರಸ್ತೆಯಲ್ಲಿ ನೀರು ಸೋರಿಕೆಯನ್ನು ತಡೆಗಟ್ಟಬಹುದು ಎಂದು ಉದ್ಯಮಿಗಳು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಸಭೆಗೆ ತಿಳಿಸಿದರು.
ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಹ್ಯಾಮಿಲ್ಟನ್ ವೃತ್ತವನ್ನು ವೈಜ್ಞಾನಿಕವಾಗಿ ನಿರ್ಮಿಸಲು ಎನ್.ಐ.ಟಿ.ಕೆ ವತಿಯಿಂದ ಮಹಾನಗರಪಾಲಿಕೆಗೆ ವರದಿ ನೀಡಲಾಗಿದ್ದು, ಅದರಂತೆ ಹ್ಯಾಮಿಲ್ಟನ್ ವೃತ್ತದ ನಕ್ಷೆಯನ್ನು ಸಲ್ಲಿಸಲಾಗಿದೆ. ಇದನ್ನು ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳು ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಈ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ನಗರಪಾಲಿಕೆಗೆ ಸೂಚಿಸಿದರು.
ನಗರದ ಪಂಪ್‍ವೆಲ್‍ನಲ್ಲಿ ಬಸ್ ಸ್ಟ್ಯಾಂಡ್ ನಿರ್ಮಿಸಲು ಕಾದಿರಿಸಲಾಗಿರುವ 7 ಎಕರೆ ಜಮೀನಿನಲ್ಲಿ 2 ಎಕರೆ ಕೆ.ಎಸ್.ಆರ್.ಟಿ.ಸಿಗೆ ಹಾಗೂ ಉಳಿದ 5 ಎಕರೆ ಖಾಸಗಿ ಬಸ್‍ಸ್ಟ್ಯಾಂಡ್ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಮಂಗಳೂರು ನಗರದ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ಈ ಮಹತ್ವದ ಯೋಜನೆಗೆ ಮಹಾನಗರಪಾಲಿಕೆ ಹಾಗೂ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ವಿಳಂಬವಿಲ್ಲದೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.
ಹಂಪನಕಟ್ಟೆ, ಸ್ಟೇಟ್‍ಬ್ಯಾಂಕ್, ಸೆಂಟ್ರಲ್ ಮಾರ್ಕೆಟ್ ಪ್ರದೇಶಗಳಲ್ಲಿ ಫುಟ್‍ಪಾತ್ ಅತಿಕ್ರಮಿಸಿ ಬೀದಿ ವ್ಯಾಪಾರ ಮಾಡುತ್ತಿರುವ ಬಗ್ಗೆ ಮಹಾನಗರಪಾಲಿಕೆಯಿಂದ ನಿರಂತರವಾಗಿ ಕಾರ್ಯಚರಣೆ ನಡೆಸಲಾಗುತ್ತಿದೆ. ಮಹಾನಗರಪಾಲಿಕೆ ಐಡಿ ಕಾರ್ಡ್ ಇರುವವರನ್ನು ಹೊರತುಪಡಿಸಿ ಇತರರಿಗೆ ಬೀದಿ ವ್ಯಾಪಾರ ಮಾಡಲು ಅವಕಾಶವಿಲ್ಲ ಎಂದು ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ತಿಳಿಸಿದರು.
ಮಂಗಳಾದೇವಿಯಲ್ಲಿ ನಿರ್ಮಿಸಲಾಗಿರುವ ನೂತನ ಬಸ್ ಸ್ಯಾಂಡ್‍ನಿಂದ ಆ ಭಾಗದ ಎಲ್ಲಾ ಬಸ್ಸುಗಳು ಸಂಚಾರ ಆರಂಭಿಸುವ ಬಗ್ಗೆ ಬಸ್ ಮಾಲಕರೊಂದಿಗೆ ಸಭೆ ನಡೆಸಲಾಗಿದ್ದು, ಶೀಘ್ರದಲ್ಲಿ ಕಾರ್ಯಾಚರಣೆಗೊಳ್ಳಲಿದೆ ಎಂದು ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಸಭೆಗೆ ತಿಳಿಸಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ. ಮಾತನಾಡಿ, ನಿರಂತರ ಅಪಘಾತಗಳಿಗೆ ಕಾರಣವಾಗುತ್ತಿರುವ ಪ್ರಮುಖ ಸ್ಥಳಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ರಾಷ್ಟ್ರೀಯ ಹೆದ್ದಾರಿ ಮತ್ತು ಲೋಕೋಪಯೋಗಿ ಇಲಾಖೆ ವರದಿ ನೀಡಲಾಗಿದ್ದು, ಕೂಡಲೇ ಇಲ್ಲಿನ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು









