(ನ್ಯೂಸ್ ಕಡಬ) newskadaba.com ಜೂ. 10. ಮಂಗಳೂರು ನಗರ ಹಾಗೂ ಜಿಲ್ಲೆಯ ವಿವಿಧ ಕಡೆಗಳಲ್ಲಿ ಜಂಕ್ಷನ್ ಹಾಗೂ ವೃತ್ತಗಳಲ್ಲಿ ಸುಗಮ ಸಂಚಾರಕ್ಕೆ ಸ್ಥಳೀಯ ನಗರ ಸಂಸ್ಥೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಸೂಚಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಹಲವು ಜಂಕ್ಷನ್, ವೃತ್ತಗಳಲ್ಲಿ ಹಾಗೂ ಮುಖ್ಯ ರಸ್ತೆಗಳಲ್ಲಿ ಪಾರ್ಕಿಂಗ್, ಒತ್ತುವರಿ, ಬೀದಿ ವ್ಯಾಪಾರದಿಂದ ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಹಲವು ದೂರುಗಳು ಬಂದಿವೆ. ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಂಡರೂ, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಗಮನಕ್ಕೆ ಬಂದಿರುತ್ತದೆ. ಈ ನಿಟ್ಟಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳು, ಆರ್.ಟಿ.ಓ, ಪೊಲೀಸ್ ಇಲಾಖೆಯೊಂದಿಗೆ ಜಂಟಿಯಾಗಿ ಪರಿಶೀಲಿಸಿ ಕೈಗೊಂಡು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವಿದ್ ಅಝ್ಮಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಹಳೆಯಂಗಡಿಯಿಂದ ತಲಪಾಡಿಯವರೆಗೆ ಪ್ರಮುಖ ಜಂಕ್ಷನ್ ವೃತ್ತಗಳಲ್ಲಿ ಸಂಚಾರ ನಿಯಂತ್ರಣಕ್ಕೆ ಹಲವಾರು ಕ್ರಮ ಕೈಗೊಳ್ಳಲಾಗಿದೆ. ಟ್ರಾಫಿಕ್ ಸಿಗ್ನಲ್, ಝೀಬ್ರಾ ಮಾರ್ಕಿಂಗ್, ವೇಗ ನಿಯಂತ್ರಕ ಸೇರಿದಂತೆ ವಾಹನಗಳ ಸುಗಮ ಸಂಚಾರ ಹಾಗೂ ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗುವಂತೆ ಪ್ರಮುಖ ಕ್ರಮ ಕೈಗೊಳ್ಳಲಾಗಿದೆ. ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿದ್ದ ಡಿವೈಡರ್ ಕ್ರಾಸಿಂಗ್‍ಗಳನ್ನು ಹಲವಡೆ ಮುಚ್ಚಲಾಗಿದೆ ಎಂದು ತಿಳಿಸಿದರು.
ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ರಾಷ್ಟ್ರೀಯ ಹೆದ್ದಾರಿಯಿಂದ ಪ್ರವೇಶಿಸಲು ಅಂಡರ್‍ಪಾಸ್ ಕಾಮಗಾರಿ ಪ್ರಗತಿಯಲ್ಲಿದೆ. ನಂತೂರು ಜಂಕ್ಷನ್ ಅಗಲೀಕರಣವು ನಡೆಯುತ್ತಿದ್ದು, ಕೆಪಿಟಿಯಿಂದ ನಂತೂರ್ ವರೆಗೆ ಸರ್ವಿಸ್ ರಸ್ತೆ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು. ಕಲ್ಲಾಪು, ಜೆಪ್ಪಿನಮೊಗರು, ತೊಕ್ಕೊಟ್ಟು ಜಂಕ್ಷನ್ ನಲ್ಲಿ ಹೆದ್ದಾರಿ ಒತ್ತುವರಿ ಮಾಡಿ ವ್ಯಾಪಾರ ಮಾಡುವುದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಸದಸ್ಯರು ಸಭೆಗೆ ತಿಳಿಸಿದರು.
ಜಂಕ್ಷನ್ ಮತ್ತು ವೃತ್ತಗಳಲ್ಲಿ ಸುಗಮ ಸಂಚಾರಕ್ಕೆ ತ್ವರಿತ ಕ್ರಮ – ಜಿಲ್ಲಾಧಿಕಾರಿ ಸೂಚನೆ









