ಜಾಗತಿಕ ಮ್ಯಾಗಜಿನ್‌ನಲ್ಲಿ ಯಶ್ ಅಬ್ಬರ – ‘ಟಾಕ್ಸಿಕ್’ ಮೇಲೆ ಹೆಚ್ಚಿದ ನಿರೀಕ್ಷೆ!

(ನ್ಯೂಸ್‌ ಕಡಬ) newskadaba.com,  ಮೇ.07:  ‘ಕೆಜಿಎಫ್’ ಮೂಲಕ ಭಾರತೀಯ ಸಿನಿರಂಗದ ದಿಕ್ಕೇ ಬದಲಿಸಿದ ರಾಕಿಂಗ್ ಸ್ಟಾರ್ ಯಶ್ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರೀ ಸದ್ದು ಮಾಡುತ್ತಿದ್ದಾರೆ. ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲು ಸಜ್ಜಾಗಿರುವ ನಡುವೆಯೇ, ಪ್ರತಿಷ್ಠಿತ ಹಾಲಿವುಡ್ ಮ್ಯಾಗಜೀನ್ ‘ವೆರೈಟಿ’ ತನ್ನ ಕವರ್ ಪೇಜ್‌ನಲ್ಲಿ ಯಶ್ ಅವರನ್ನು ಫೀಚರ್ ಮಾಡಿದ್ದು, “The Yash Effect” ಎಂಬ ಶೀರ್ಷಿಕೆಯಿಂದ ವಿಶೇಷ ಲೇಖನ ಪ್ರಕಟಿಸಿದೆ.

ಬಿಳಿ ಬಣ್ಣದ ಸೂಟ್ ಮತ್ತು ಸ್ಟೈಲಿಶ್ ಹ್ಯಾಟ್ ಧರಿಸಿ ಐಷಾರಾಮಿ ಕಾರಿನೊಳಗೆ ಕುಳಿತಿರುವ ಯಶ್ ಅವರ ಲುಕ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ಕವರ್ ಸ್ಟೋರಿ ಯಶ್ ಅವರನ್ನು ಕೇವಲ ನಟನಾಗಿ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರುವ ನಿರ್ಮಾಪಕನಾಗಿಯೂ ಪರಿಚಯಿಸಿದೆ.

ಟಾಕ್ಸಿಕ್ ಚಿತ್ರದ ಪ್ರಚಾರದ ಭಾಗವಾಗಿ ಈ ವಿಶೇಷ ಫೀಚರ್ ಪ್ರಕಟವಾಗಿದ್ದು, ಸಿನಿಮಾ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಕನ್ನಡ ನಟನೊಬ್ಬ ಹಾಲಿವುಡ್ ಮಟ್ಟದ ಪ್ರತಿಷ್ಠಿತ ಮ್ಯಾಗಜೀನ್ ಕವರ್ ಪೇಜ್‌ನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಹೆಮ್ಮೆಯ ಕ್ಷಣವಾಗಿದೆ.

ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಟಾಕ್ಸಿಕ್’ ಸಿನಿಮಾ ಸಾಂಪ್ರದಾಯಿಕ ಮಾಸ್ ಎಂಟರ್‌ಟೈನರ್ ಆಗಿರದೆ, ವಿಭಿನ್ನ ಶೈಲಿಯ ಚಿತ್ರವಾಗಲಿದೆ ಎಂದು ಚಿತ್ರತಂಡ ಹೇಳಿದೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ಯಶ್ ಅವರ ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್’ ಸಂಸ್ಥೆಯೂ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ.

ವೆರೈಟಿ ಕವರ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ #YashBOSS ಮತ್ತು #ToxicTheMovie ಹ್ಯಾಶ್‌ಟ್ಯಾಗ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ಗೆ ಬಂದಿವೆ. ಯಶ್ ತಮ್ಮ ‘ಲಾರ್ಜರ್ ದ್ಯಾನ್ ಲೈಫ್’ ಇಮೇಜ್‌ನಿಂದ ಹೊರಬಂದು ಹೊಸ ರೀತಿಯ ಸಿನೆಮಾ ಪ್ರಯೋಗಗಳಿಗೆ ಕೈ ಹಾಕುತ್ತಿರುವುದನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಕಲಾತ್ಮಕ ಸಿನಿಮಾಗಳಿಗೆ ಹೆಸರಾಗಿರುವ ನಿರ್ದೇಶಕಿ ಗೀತು ಮೋಹನ್ ದಾಸ್ ಹಾಗೂ ಮಾಸ್ ಹೀರೋ ಯಶ್ ಅವರ ಈ ಅಪರೂಪದ ಕಾಂಬಿನೇಷನ್ ಭಾರತೀಯ ಸಿನಿರಂಗದಲ್ಲಿ ಹೊಸ ಇತಿಹಾಸ ನಿರ್ಮಿಸುವ ಸೂಚನೆ ನೀಡುತ್ತಿದೆ.

Scroll to Top