ಯಮುನಾ ನದಿಯಲ್ಲಿ ದೋಣಿ ದುರಂತ – 6 ಮಂದಿ ಕಣ್ಮರೆ, ಮೂವರ ರಕ್ಷಣೆ



(ನ್ಯೂಸ್‌ ಕಡಬ) newskadaba.com,  ಮೇ.07:  ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಯಮುನಾ ನದಿಯಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಆರು ಮಂದಿ ನಾಪತ್ತೆಯಾಗಿದ್ದು, ಮೂವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಬುಧವಾರ ಘಟಂಪುರದಿಂದ ಒಂಬತ್ತು ಜನರನ್ನು ಕರೆದೊಯ್ಯುತ್ತಿದ್ದ ದೋಣಿ ಮಧ್ಯನದಿಯಲ್ಲಿ ಮುಳುಗಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ..







ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಗ್ರಾಮಸ್ಥರು ಹಾಗೂ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಜಿಲ್ಲಾ ಮ್ಯಾಜಿಸ್ಟ್ರೇಟ್ ಅಭಿಷೇಕ್ ಗೋಯಲ್ ಮಾಹಿತಿ ನೀಡಿ, “ಒಂಬತ್ತು ಜನರಿದ್ದ ದೋಣಿ ಯಮುನಾ ನದಿಯಲ್ಲಿ ಮುಳುಗಿದೆ. ಮೂವರನ್ನು ರಕ್ಷಿಸಲಾಗಿದ್ದು, ಉಳಿದ ಆರು ಮಂದಿ ನಾಪತ್ತೆಯಾಗಿದ್ದಾರೆ. ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಹಾಗೂ ಪ್ರವಾಹ ಪರಿಹಾರ ತಂಡಗಳನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ,” ಎಂದು ತಿಳಿಸಿದ್ದಾರೆ.






ನಿಯಮಿತ ಪ್ರವಾಸದಿಂದ ಹಿಂದಿರುಗುತ್ತಿದ್ದ ವೇಳೆ ದೋಣಿ ನೀರಿನಲ್ಲಿ ಮುಳುಗಿದೆ ಎಂದು ತಿಳಿದುಬಂದಿದೆ. ದೋಣಿ ಚಾಲಕನ ಪ್ರಕಾರ, ದೋಣಿ ಮಗುಚಿ ಬೀಳದೆ ನಿಧಾನವಾಗಿ ನೀರಿನಲ್ಲಿ ಮುಳುಗತೊಡಗಿತು. ಈಜು ಬಲ್ಲವರು ಸುರಕ್ಷಿತವಾಗಿ ದಡ ಸೇರಿದ್ದಾರೆ. ಆದರೆ ಉಳಿದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಕಾಣೆಯಾದವರಲ್ಲಿ ಐದು ಮಕ್ಕಳು ಹಾಗೂ ಒಬ್ಬ ಮಹಿಳೆ ಸೇರಿದ್ದಾರೆ ಎಂದು ಬಿಜೆಪಿ ಶಾಸಕ ಮನೋಜ್ ಪ್ರಜಾಪತಿ ತಿಳಿಸಿದ್ದಾರೆ. “ಆಡಳಿತ ಸಂಪೂರ್ಣ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದೆ. ಮೂರು ಎಸ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಘಟನೆಯ ಸಂಪೂರ್ಣ ವರದಿಯನ್ನು ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಾಗುತ್ತದೆ,” ಎಂದು ಅವರು ಹೇಳಿದ್ದಾರೆ.

ಬಂದಾ ವಿಭಾಗದ ಡಿಐಜಿ ರಾಜೇಶ್ ಯಶ್ ಮಾಹಿತಿ ನೀಡಿ, “ದೋಣಿಯಲ್ಲಿ ಒಟ್ಟು ಒಂಬತ್ತು ಮಂದಿ ಪ್ರಯಾಣಿಸುತ್ತಿದ್ದರು. ಮೂವರು ಈಜಿಕೊಂಡು ಪಾರಾಗಿದ್ದಾರೆ. ಆದರೆ ಒಬ್ಬ ಮಹಿಳೆ ಹಾಗೂ 5ರಿಂದ 15 ವರ್ಷದೊಳಗಿನ ಐದು ಮಕ್ಕಳು ನಾಪತ್ತೆಯಾಗಿದ್ದಾರೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ರಕ್ಷಣಾ ತಂಡಗಳು ಸ್ಥಳದಲ್ಲೇ ಕಾರ್ಯಾಚರಣೆ ಮುಂದುವರಿಸಿವೆ,” ಎಂದು ತಿಳಿಸಿದ್ದಾರೆ.

error: Content is protected !!
Scroll to Top