(ನ್ಯೂಸ್ ಕಡಬ) newskadaba.com,ಎ.11 : ನಗರದ ಮಂತ್ರ ನಾಟ್ಯಕಲಾ ಗುರುಕುಲದ ನಿರ್ದೇಶಕರು, ಪ್ರತಿಭಾನ್ವಿತ ಭರತ ನಾಟ್ಯ ಗುರುಗಳೂ, ಆರ್ಯಭಟ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟ್ಯ ಶಿರೋಮಣಿ, ನಾಟ್ಯ ವಿದ್ವಾನ್ ಶ್ರೀ ಶ್ರಾವಣ್ ಉಳ್ಳಾಲ್ ಅವರು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.
ಉಳ್ಳಾಲದ ಬಂಡಿಕೊಟ್ಟ ನಿವಾಸಿಯಾಗಿದ್ದ ಇವರು ದೂರದರ್ಶನ ಗ್ರೇಡೆಡ್ ಕಲಾವಿದರಾಗಿದ್ದರು. ಸಾವಿತ್ರಿ ರಾಮರಾವ್ ಅವರಲ್ಲಿ ವೀಣಾ ವಾದನವನ್ನು ಕರಗತ ಮಾಡಿಕೊಂಡಿದ್ದರು. ಕಾನೂನು ಪದವೀಧರ ಕೂಡ ಆಗಿದ್ದ ಇವರು ನೃತ್ಯದಲ್ಲಿ ಸ್ನಾತಕೋತ್ತರ ಎಂ.ಎ. ಪದವಿಯನ್ನು ಕಲೆ ಕಾವೇರಿ ಕಾಲೇಜ್ ಆಫ್ ಫೈನ್ ಆರ್ಟ್ಸ್ ತಮಿಳುನಾಡು ವಿಶ್ವವಿದ್ಯಾನಿಲಯದಿಂದ ಪಡೆದಿದ್ದರು.
ಇನ್ನು ಪಂದನಲ್ಲೂರು ಶೈಲಿಯ ಭರತನಾಟ್ಯವನ್ನು ದೇಶದ ವಿವಿಧ ರಾಜ್ಯಗಳಲ್ಲಿ ಪರಿಚಯಿಸಿ ಒರಿಸ್ಸಾ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ಗುಜರಾತ್ ಸೇರಿದಂತೆ ಅನೇಕ ರಾಜ್ಯಗಳ ಸಾಂಸ್ಕೃತಿಕ ವೇದಿಕೆಗಳಲ್ಲಿ ಪ್ರದರ್ಶನ ನೀಡಿದರು. ವಿದೇಶಗಳಲ್ಲಿ ಭರತನಾಟ್ಯ, ಕೂಚುಪುಡಿ, ಕಥಕ್, ಒಡಿಸ್ಸಿ ಹಾಗೂ ಯಕ್ಷಗಾನಗಳ ಸಮ್ಮಿಲನದ ಪ್ರದರ್ಶನ ನೀಡಿದ್ದರು. ‘ಮೋಕ್ಷಂ, ‘ರುದ್ರ ವೀರಭದ್ರ’, ‘ಶ್ರೀಕೃಷ್ಣ ಲೀಲಾಮೃತಂ; ‘ತ್ರಿಶಕ್ತಿ’, ‘ನೃಸಿಂಹ ಚಲತಂ’ ‘ದಶ ಹಲರೂಪಂ’ ‘ಶಕ್ತಿ’ ಮೊದಲಾದ ನೃತ್ಯ ರೂಪಕಗಳ ಮೂಲಕ ಜನಮನ್ನಣೆ ಪಡೆದಿದ್ದರು.
ಮಂತ್ರ ನಾಟ್ಯಕಲಾ ಗುರುಕುಲವು ಕಳೆದ ಹಲವಾರು ವರ್ಷಗಳಿಂದ ಮಂಗಳೂರಿನಾದ್ಯಂತ ಪಂದನಲ್ಲೂರು ಶೈಲಿಯ ಭರತನಾಟ್ಯವನ್ನು ನೃತ್ಯಾಸಕ್ತ ವಿದ್ಯಾರ್ಥಿಗಳಿಗೆ ಭೋದಿಸಿ ಒರಿಸ್ಸಾ, ಕಲ್ಕತ್ತಾ, ಪಶ್ಚಿಮ ಬಂಗಾಳ, ಕೊಜ್ಜಿನ್, ಕೇರಳ, ಚೆನ್ನೈ, ಮುಂಬೈ, ಮಹಾರಾಷ್ಟ್ರ, ನವದೆಹಲಿ, ಅವಪುಲ, ಆಗ್ರಾ, ಉತ್ತರ ಪ್ರದೇಶ ಸೇರಿದಂತೆ ದೇಶದ 12 ರಾಜ್ಯಗಳ ಅಂತರಾಷ್ಟ್ರೀಯ, ರಾಷ್ಟ್ರೀಯ ಹಾಗೂ ಧಾರ್ಮಿಕ ಕ್ಷೇತ್ರಗಳ ಉತ್ಸವಗಳಲ್ಲಿ ನೃತ್ಯ ಪ್ರದರ್ಶನವನ್ನು ನೀಡಿದೆ









