ಆಹಾರವೆಂದು ಪ್ಲಾಸ್ಟಿಕ್ ಕವರ್ ಕಚ್ಚಿದ ನಾಯಿ ಸ್ಥಳದಲ್ಲೇ ಛಿದ್ರ ಛಿದ್ರ; ಬೆಚ್ಚಿಬಿದ್ದ ಗ್ರಾಮಸ್ಥರು

(ನ್ಯೂಸ್‌ ಕಡಬ) newskadaba.com,  ಜೂ.22  ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಕುದರೆ ಗ್ರಾಮದಲ್ಲಿ ರಸ್ತೆ ಬದಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್ ಕಚ್ಚಿದ ಸಾಕುನಾಯಿಯೊಂದು ಭೀಕರ ಸ್ಫೋಟಕ್ಕೆ ಬಲಿಯಾಗಿದೆ.ಗ್ರಾಮದ ನಿವಾಸಿ ರುದ್ರೇಶ್ ಅವರು ಜಮೀನಿಗೆ ದನ ಮೇಯಿಸಲು ಹೋಗುತ್ತಿದ್ದಾಗ ಅವರ ಸಾಕುನಾಯಿಯೂ ಜೊತೆಗಿತ್ತು.

ಈ ವೇಳೆ ರಸ್ತೆ ಬದಿಯಲ್ಲಿದ್ದ ಪ್ಲಾಸ್ಟಿಕ್ ಕವರ್‌ನಲ್ಲಿ ಆಹಾರ ಇರಬಹುದೆಂದು ಭಾವಿಸಿ ನಾಯಿ ಅದನ್ನು ಕಚ್ಚಿದ ತಕ್ಷಣವೇ ಅದು ಪ್ರಬಲವಾಗಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ನಾಯಿಯ ಮುಖ ಛಿದ್ರಗೊಂಡು ಸ್ಥಳದಲ್ಲೇ ಮೃತಪಟ್ಟಿದೆ.ಈ ಸ್ಫೋಟದ ಸದ್ದು ಸುಮಾರು 1 ಕಿಲೋಮೀಟರ್‌ವರೆಗೂ ಕೇಳಿಸಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಕಾಡು ಹಂದಿಗಳನ್ನು ಕೊಲ್ಲಲು ಇಡುವ ಕಾನೂನುಬಾಹಿರ ಸಿಡಿಮದ್ದು (ನಾಡುಬಾಂಬ್) ಇದಾಗಿರಬಹುದು ಎಂದು ಶಂಕಿಸಲಾಗಿದೆ.

ಘಟನಾ ಸ್ಥಳಕ್ಕೆ ಧಾವಿಸಿದ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಸ್ಫೋಟಗೊಂಡ ವಸ್ತುವಿನ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ವರದಿ ಬಂದ ಬಳಿಕವಷ್ಟೇ ಸ್ಫೋಟಕದ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Scroll to Top